Advertisement

Festival; ಕರಾವಳಿಯಾದ್ಯಂತ ನಾಗರ ಪಂಚಮಿ ಹಬ್ಬದ ಸಡಗರ, ಸಂಭ್ರಮ

01:34 AM Aug 10, 2024 | Team Udayavani |

ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸಹಿತ ಕರಾವಳಿಯಾದ್ಯಂತ ನಾಗರಪಂಚಮಿ ಯನ್ನು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

Advertisement

ನಾಗ ಕ್ಷೇತ್ರಗಳು, ದೇವಾಲಯಗಳ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನ ಗಳಲ್ಲಿ ನಾಗತಂಬಿಲ, ಸೀಯಾಳಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿ ಜರಗಿದವು. ಭಕ್ತರಿಂದ ಕ್ಷೇತ್ರದರ್ಶನ, ವಿಶೇಷ ಪೂಜೆಗಳು ನೆರ ವೇರಿ ದವು.

ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧಾನ ಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯಾಪ್ತಿಯಲ್ಲಿ ಸಂಭ್ರಮ-ಸಡಗರದೊಂದಿಗೆ ನಾಗರ ಪಂಚಮಿ ನೆರವೇರಿತು.

ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಾಗರ ಪಂಚಮಿ ನಡೆಯಿತು. ಶ್ರೀ ಅನಂತಪದ್ಮನಾಭ ದೇವರಿಗೆ ಉಷಾಃಕಾಲ ಪೂಜೆಯೊಂದಿಗೆ ವಿಶೇಷವಾದ ಪಂಚಾಮೃತ ಅಭಿಷೇಕ ನವಕ ಪ್ರದಾನ ಕಲಶಾಭಿಷೇಕ ಸಹಸ್ರನಾಮ ಅರ್ಚನೆ, ಅಷ್ಟೋತ್ತರ ಅರ್ಚನೆ ವಿವಿಧ ಅರ್ಚನೆಗಳ ಸೇವೆ ನಡೆಯಿತು.

ಸುಮಾರು 50 ಸಹಸ್ರಕ್ಕಿಂತಲೂ ಮಿಕ್ಕಿ ಭಕ್ತ ಜನರು ಆಗಮಿಸಿ ಶ್ರೀ ದೇವರಿಗೆ ಕೇದಗೆ, ಸಂಪಿಗೆ ಹಿಂಗಾರ ಹಾಗೂ ವಿಶೇಷವಾದ ಮಲ್ಲಿಗೆ ಹೂವನ್ನು ಅರ್ಪಿಸಿದರು.

Advertisement

ಶ್ರೀ ದೇವರಿಗೆ ಚಿನ್ನ ಬೆಳ್ಳಿಯ ಹರಕೆಯನ್ನು ಅರ್ಪಿಸಿ ಭಕ್ತಿಯಿಂದ ಪಂಚಾಮೃತ ಹಾಗೂ ತಂಬಿಲ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಮಧ್ಯಾಹ್ನ 20 ಸಾವಿರದಷ್ಟು ಭಕ್ತರು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು.

ಭಕ್ತರಿಂದ ಶ್ರೀ ದೇವರಿಗೆ 50 ಸಾವಿರ ಸೀಯಾಳ, ಸುಮಾರು 100 ಲೀ.ಗೂ. ಮಿಕ್ಕಿ ಹಾಲು ಅರ್ಪಣೆಗೊಂಡಿತು. ಭಕ್ತರಿಂದ ಶ್ರೀದೇವರಿಗೆ 12,000 ತಂಬಿಲ ಸೇವೆ 2,500 ಪಂಚಾಮೃತ ಅಭಿಷೇಕ ಸೇವೆ ಅರ್ಪಣೆಗೊಂಡಿತು.ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ, ಮೂಡುಬಿದಿರೆ, ಉಳ್ಳಾಲ ಸಹಿತ ವಿವಿಧ ಭಾಗಗಳ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು.

ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ, ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಸಹಿತ ವಿವಿಧ ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಿಸಲಾಯಿತು.

ಉಡುಪಿ ಶ್ರೀಕೃಷ್ಣ ಮಠದ ಶ್ರೀ ವಾದಿರಾಜ ಪ್ರತಿ ಷ್ಠಾಪಿತ ಸುಬ್ರಹ್ಮಣ್ಯ, ನಾಲ್ಕು ಸ್ಕಂದಾಲಯಗಳು (ಮುಚ್ಚಲಕೋಡು, ಮಾಂಗೋಡು, ತಾಂಗೋಡು, ಅರಿತೋಡು), ನೀಲಾವರ ಪಂಚಮಿಕಾನ, ಕಾಳಾವರ, ಮಂದಾರ್ತಿ, ಸೇನಾ ಪುರದ ಗುಡ್ಡಮ್ಮಾಡಿ, ಉಳ್ಳೂರು, ನಂದಳಿಕೆ, ಸೂಡ ಮೊದಲಾದ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಕುಟುಂಬಗಳ ನಾಗಬನದಲ್ಲಿ ನಾಗರ ಪಂಚಮಿ
ಕರಾವಳಿಯ ವಿವಿಧ ಕಡೆಗಳಲ್ಲಿರುವ ವಿವಿಧ ಕುಟುಂಬಗಳ ಮೂಲಬನಗಳಲ್ಲಿ ಶುಕ್ರವಾರ ನಾಗದೇವರಿಗೆ ತಂಬಿಲ, ಕ್ಷೀರಾಭಿ ಷೇಕ, ಸೀಯಾಳಾಭಿಷೇಕ ನಡೆ ದವು. ಸಹಸ್ರ ಸಂಖ್ಯೆಯಲ್ಲಿ ಭಕ್ತರು ನಾಗರಪಂಚಮಿಯಲ್ಲಿ ಪಾಲ್ಗೊಂಡರು.

ಸ್ವಚ್ಛ ನಾಗರಪಂಚಮಿ ಅಭಿಯಾನ ಯಶಸ್ವಿ
ಉಡುಪಿ: ಸ್ಥಳೀಯ ಸಂಸ್ಥೆಗಳೊಂ ದಿಗೆ ಉದಯವಾಣಿ ಹಮ್ಮಿಕೊಂಡ ಸ್ವಚ್ಛ ನಾಗರ ಪಂಚಮಿ ಅಭಿಯಾನ ಯಶಸ್ವಿಯಾಗಿದೆ.

ಉಡುಪಿ ನಗರಸಭೆ, ಕಾಪು ಪುರಸಭೆ, ಸಾಲಿಗ್ರಾಮ ಪ. ಪಂ., ಕೋಟತಟ್ಟು, ಪಡುಬಿದ್ರಿ, ವಾರಂಬಳ್ಳಿ ಗ್ರಾ. ಪಂ.ಗಳು ಕೈಜೋಡಿಸಿದ್ದು, ತ್ಯಾಜ್ಯ ಸಂಗ್ರಹಕ್ಕೆ ಡಬ್ಬಿ ಮತ್ತು ಕೈಚೀಲ ಒದಗಿಸಲಾಗಿತ್ತು. ಶುಕ್ರವಾರ ಸಂಜೆಯೇ ಎಲ್ಲ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ.

ಮಾದರಿ ಅಭಿಯಾನ: ಉದಯವಾಣಿ-ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರಗಿದ ಸ್ವತ್ಛ ನಾಗರಪಂಚಮಿ ಅಭಿಯಾನ ಮಾದರಿ ಯೋಜನೆಯಾಗಿದೆ. ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಇಂಥ ಕಾರ್ಯಕ್ರಮಗಳು ನಿರಂತರ ಜರಗಬೇಕು. ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮಾಂತರ ಸ್ಥಳೀಯಾಡಳಿತ ಸಂಸ್ಥೆಗಳು ಇಂಥ ಕಾರ್ಯಯೋಜನೆ ರೂಪಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next