ಉಡುಪಿ: ದೇವರು ಮತ್ತು ಸ್ವತ್ಛತೆ ಒಂದೇ ಕಲ್ಪನೆ. ಸ್ವತ್ಛತೆ ಇಲ್ಲದೇ ದೇವರಿಲ್ಲ. ಹಾಗೆಯೇ ಪ್ರಾಚೀನ ಸಂಪ್ರದಾಯದ ಷೋಡಶೋಪಚಾರ ಪೂಜೆಗಳಲ್ಲಿಯೂ ನೈರ್ಮಲ್ಯ ವಿಸರ್ಜನೆ ಪೂಜೆಯೂ ಒಂದು. ಪ್ರಸ್ತುತ ಉಡುಪಿ ನಗರದಲ್ಲಿ ಸ್ವತ್ಛ ನಾಗರ ಪಂಚಮಿ ಆಚರಣೆ ಎಲ್ಲರೂ ಸಂಕಲ್ಪ ಮಾಡಬೇಕಿದೆ. ಇತ್ತೀಚೆಗೆ ನಾಗರ ಪಂಚಮಿಗಳಲ್ಲಿ ಬತ್ತಿ, ಎಣ್ಣೆ, ಅಕ್ಕಿ, ಎಳನೀರು, ಊದು ಬತ್ತಿಗಳ ಪ್ಲಾಸ್ಟಿಕ್ ಪೊಟ್ಟಣಗಳು ಒಂದೆಡೆ ಬಿದ್ದಿದ್ದರೆ, ಮತ್ತೂಂದೆಡೆ ಎಳನೀರು ಸಹಿತ ಸೊಳ್ಳೆ ಉತ್ಪಾದನೆಗೆ ಏನು ಬೇಕೋ ಅವೆಲ್ಲವೂ ಕಣ್ಣಿಗೆ ಕುಕ್ಕುವಂತೆ ರಾರಾಜಿಸುತ್ತಿರುತ್ತವೆ. ಸಾಧ್ಯವಾದಷ್ಟು ಇದರ ನಿಯಂತ್ರಣ ಜತೆಗೆ ಶೀಘ್ರ ತ್ಯಾಜ್ಯ ತೆರವು ಮಾಡುವ ವ್ಯವಸ್ಥೆ ಇಂದಿನ ತುರ್ತು ಅಗತ್ಯವಾಗಿದೆ.
ಡೆಂಗ್ಯೂ, ಮಲೇರಿಯಾ, ಇನ್ನಿತರ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಸ್ವತ್ಛತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ನಾಗಬನಗಳಲ್ಲಿ ಎಳನೀರು ಸಹಿತ ಇನ್ನಿತರ ತ್ಯಾಜ್ಯ ಸಂಗ್ರಹಕ್ಕೆ ನಗರಸಭೆ ವತಿಯಿಂದಲೇ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಭಕ್ತರು ಪೂಜೆ ಸಲ್ಲಿಸಲು ಬರುವಾಗ ಸಾಧ್ಯವಾದಷ್ಟು ಪ್ಲಾಸ್ಟಿಕ್ ತೊಟ್ಟೆಗಳನ್ನು ತರದೇ, ಹಳೆ ಬಾಟಲಿಗಳು, ಚೀಲ, ಪೇಪರುಗಳಲ್ಲಿ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬಹುದು. ಉದಾಹರಣೆಗೆ ಎಣ್ಣೆ, ಬತ್ತಿ, ಅರಶಿನದ ಹುಡಿ, ಎಳನೀರನ್ನು ಈ ಮಾದರಿಯಲ್ಲಿ ನಿರ್ವಹಿಸ ಬಹುದು. ಅದಾದ ಮೇಲೂ ಪೂಜೆ ಮುಗಿದ ಮೇಲೆ ಅವುಗಳನ್ನೆಲ್ಲ ಅಲ್ಲೇ ಎಸೆಯದೇ ವಾಪಸು ಕೊಂಡೊಯ್ಯಬೇಕು. ಎಳನೀರಿನ ಚಿಪ್ಪನ್ನು ಹೋಳು ಮಾಡಿ ಉರುವಲಿಗೆ ಬಳಸಬಹುದು ಅಥವಾ ತೆಂಗಿನ ಕಟ್ಟೆಯಲ್ಲಿ ಹೂತು ಗೊಬ್ಬರವಾಗಿ ಬಳಸಬಹುದು.
200 ಡಸ್ಟ್ ಬಿನ್ ಸಿದ್ಧ
ನಗರಸಭೆ ನಗರದ 35 ವಾರ್ಡ್‌ಗಳಲ್ಲಿ ಸಾರ್ವಜನಿಕ ನಾಗಬನಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಿಗೆ ನಗರಸಭೆಯ ಡಸ್ಟ್ ಬಿನ್ ಮತ್ತು ಚೀಲದ ವ್ಯವಸ್ಥೆ ಕೊಡಲಾಗುತ್ತದೆ. ಸದ್ಯಕ್ಕೆ 200 ಡಸ್ಟ್‌ಬಿನ್‌ಗಳು ನಗರಸಭೆಯಲ್ಲಿದೆ. ಇದನ್ನು ನಗರಸಭೆ ವತಿಯಿಂದ ನಾಗಬನಗಳಿಗೆ ಪೂರೈಸುವ ಕೆಲಸ ನಡೆಯುತ್ತದೆ. 35 ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹ ವಾಹನವುನಾಗರಪಂಚಮಿಯಂದು (ಆ. 9) ಸಂಜೆ ಮತ್ತು ಮರುದಿನ ಬೆಳಗ್ಗೆ ನಾಗನ ಕಟ್ಟೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಲಿದೆ. ಡಸ್ಟ್‌ಬಿನ್ ಪೂರೈಕೆ ಮತ್ತು ತ್ಯಾಜ್ಯ ಸಂಗ್ರಹದ ಮಾಹಿತಿಗಾಗಿ ಆರೋಗ್ಯ ನಿರೀಕ್ಷಕರನ್ನು ಆಯಾ ವಾರ್ಡ್‌ನ ನಾಗಬನ ಪ್ರಮುಖರು ಸಂಪರ್ಕಿಸ ಬಹುದು ಎಂದು ಪರಿಸರ ಎಂಜಿನಿಯರ್ ಸ್ನೇಹಾ ಅವರು ತಿಳಿಸಿದ್ದಾರೆ.
ನಾಗ ಬನ ಸ್ವತ್ಛವಾಗಿರಲಿ
ಉದಯವಾಣಿ-ಉಡುಪಿ ನಗರಸಭೆ ಸಹಭಾಗಿತ್ವದಲ್ಲಿ ನಾಗ ಬನಗಳಲ್ಲಿ ಸ್ವತ್ಛತೆ ಕಾಪಾಡುವ ಉದ್ದೇಶ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ “ನಾಗರ ಪಂಚಮಿ ಸ್ವತ್ಛ ಪಂಚಮಿ’ ಅಭಿಯಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ನಾಗಬನಗಳಿಗೆ ಡಸ್ಟ್ ಬಿನ್, ಚೀಲಗಳನ್ನು ನಗರಸಭೆಯೇ ಪೂರೈಕೆ ಮಾಡಲಿದೆ. ಎಲ್ಲರೂ ಡಸ್ಟ್ ಬಿನ್‌ಗಳಿಗೆ ತ್ಯಾಜ್ಯವನ್ನು ಹಾಕಬೇಕು. ಎಲ್ಲ ತ್ಯಾಜ್ಯವನ್ನು ಉಡುಪಿ ನಗರಸಭೆ ವ್ಯವಸ್ಥಿತವಾಗಿ ತೆರವುಗೊಳಿಸಲಿದೆ. ಪರಿಸರ ಅಧಿಕಾರಿಗಳಿಗೆ, ಆರೋಗ್ಯ ನಿರೀಕ್ಷಕರಿಗೆ
ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಡೆಂಗ್ಯೂ, ಮಲೇರಿಯಾ ಹೆಚ್ಚುತ್ತಿರುವುದರಿಂದ ಯಾರು ಸಹ ಎಳನೀರು ಸಹಿತ ಮೊದಲಾದ ತ್ಯಾಜ್ಯವನ್ನು ಸಾರ್ವಜನಿಕವಾಗಿ ಎಸೆಯಬೇಡಿ. ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ನಮ್ಮ ಪರಿಸರವನ್ನು ಸೊಳ್ಳೆ ಉತ್ಪಾದನ ತಾಣವಾಗದಂತೆ ನೋಡಿಕೊಳ್ಳೋಣ.
-ರಾಯಪ್ಪ, ಪೌರಾಯುಕ್ತರು, ಉಡುಪಿ
ಭಕ್ತರು ಏನು ಮಾಡಬಹುದು ?
ಪೂಜೆಗೆ ತೆರಳುವಾಗ ಪ್ಲಾಸ್ಟಿಕ್ ತೊಟ್ಟೆಗಳನ್ನು ಕೊಂಡೊಯ್ಯಬೇಡಿ.
ತ್ಯಾಜ್ಯ ಇದ್ದರೆ ತೊಟ್ಟಿಯಲ್ಲಿ ಮಾತ್ರ ಹಾಕಿ
ಕಸಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ
ಭಕ್ತಿಯೊಂದಿಗೆ ಸ್ವತ್ಛತೆಗೂ ಆದ್ಯತೆ ನೀಡಿ