ಅಫಜಲಪುರ: ತಾಲೂಕಿನ ಶೇಷಗಿರಿ ಗ್ರಾಮದ ಗ್ರಾಮ ದೇವತೆಯಾದ ನಾಗಮ್ಮತಾಯಿ ಜಾತ್ರೆ ನಿಮಿತ್ತ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಏಳು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.
ಶೇಷಗಿರಿಯಲ್ಲಿ ನಾಗಮ್ಮ ತಾಯಿ ಜಾತ್ರೆ ನಿಮಿತ್ತ ಗುರುವಾರ ರಾತ್ರಿ 10 ಗಂಟೆಗೆ ತಾಯಿಯ ಪಲ್ಲಕ್ಕಿ ಉತ್ಸವ ಜರುಗಿತು. ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗ್ಗೆ 6 ಗಂಟೆಗೆ ನಾಗಮ್ಮತಾಯಿ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಗದ್ದುಗೆಗೆ ಹೂವಿನಿಂದ ಅಲಕಾರ, ಬೆಳಗ್ಗೆ 9:30ಕ್ಕೆ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ, ನಂತರ 12:35ಕ್ಕೆ ಸರಳ ಸಾಮೂಹಿಕ ವಿವಾಹ ಜರುಗಿದವು.
ಶ್ರೀ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರು ಮಾತನಾಡಿ, ಬಡತನದಿಂದ ಕುಟುಂಬ ನಿರ್ವಹಣೆ ದುಸ್ತರವಾಗಿರುವ ಸಂದರ್ಭದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪಾಲಿಗೆ ವರದಾನವಾಗಿವೆ ಎಂದರು.
ಮಂಗಳೂರನ ಶ್ರೀ ಸಿದ್ಧರಾಮ ಶಿವಯೋಗಿ ಶಿವಾಚಾರ್ಯರು, ಮಾಶಾಳದ ಕೇದಾರ ಶ್ರೀಗಳು ಮಾತನಾಡಿ, ಮತ-ಪಂಥಗಳನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಸರ್ವಧರ್ಮಿàಯರ ಸಹಭಾಗಿತ್ವದಲ್ಲಿ ನಡೆಯುವ ಸರಳ ಸಾಮೂಹಿಕ ವಿವಾಹಗಳು ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಲ್ಲಿ ಬಡವರ ಪಾಲಿನ ಸಂಜೀವಿನಿಯಾಗಿವೆ ಎಂದರು.
ನಾಗಣಸೂರನ ಶ್ರೀ ಅಭಿನವ ಮಹಾಂತದೇವರು, ಖೇಡಗಿಯ ಬಸವರಾಜೇಂದ್ರ ಮಹಾ ಸ್ವಾಮಿಗಳು, ಗೊರಗುಂಡಿಯ ವರಲಿಂಗ ಮಹಾ ಸ್ವಾಮಿಗಳು ಆಶೀರ್ವಚನ ನೀಡಿದರು. ಸಮಾಜ ಸೇವಕ ಜೆ.ಎಂ. ಕೊರಬು ಮಾಂಗಲ್ಯ ಸೇವೆ, ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರ ಮದ್ದಿನ ಸೇವೆ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ ಮಂಟಪ ಸೇವೆ, ಕಾಲುಂಗುರ ದಾನಿಗಳು ಭೀಮಾಶಂಕರ ಭೂಯ್ನಾರ, ಚಿದಾನಂದ ಪೂಜಾರಿ ಪ್ರಸಾದ ವ್ಯವಸ್ಥೆ ಮಾಡಿದ್ದರು. ಗ್ರಾಮದ ಮುಖಂಡರಾದ ಮಹಾದೇವಗೌಡ ಪೋಲಿಸ ಪಾಟೀಲ, ಪರಮೇಶ್ವರ ದೇಸಾಯಿ, ಹುವ್ವಣ್ಣಾ ಅವಟೆ, ವಿದ್ಯಾಧರ ಮಂಗಳೂರ, ಜಗದೇವ ಪೂಜಾರಿ ಹಾಗೂ ದೇವಸ್ಥಾನ ಸಮಿತಿಯವರು, ಭಕ್ತರು ಇದ್ದರು.