ಕನ್ನಡದಲ್ಲಿ ಹೊಸಬರ ಪ್ರಯೋಗ ಹೆಚ್ಚಾಗುತ್ತಿದೆ. ಹೊಸತನದ ಚಿತ್ರದೊಂದಿಗೆ ನೂರೆಂಟು ಕನಸು ಕಟ್ಟಿಕೊಂಡು ಬರುವ ಯುವ ನಿರ್ದೇಶಕರು, ಇಲ್ಲಿ ಗಟ್ಟಿಯಾಗಿ ನಿಲ್ಲಬೇಕೆಂಬ ಕಾರಣಕ್ಕೆ ಆಕರ್ಷಿಸುವ ಶೀರ್ಷಿಕೆ ಜೊತೆ ಅಚ್ಚರಿ ಕಥೆಯೊಂದಿಗೆ ಬರುತ್ತಿದ್ದಾರೆ. ಈಗ “ನಡುವೆ ಅಂತರವಿರಲಿ’
ಎಂಬ ಹೊಸಬರ ತಂಡ ಕೂಡ ಅದೇ ಸಾಲಿನ ಚಿತ್ರ. ಈ ಚಿತ್ರದ ಮೂಲಕ ರವೀನ್ ನಿರ್ದೇಶಕರಾಗುತ್ತಿದ್ದಾರೆ. ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ರವೀನ್ ಅವರಿಗಿದೆ. ಇದು ಪಕ್ಕಾ ಯೂಥ್ ಸಿನಿಮಾ.
ಹದಿಹರೆಯದ ಪ್ರೇಮಿಗಳು ತಮಗೆ ಗೊತ್ತಿಲ್ಲದೆಯೇ ಮಾಡಿದ ತಪ್ಪಿನಿಂದ ಆಗುವ ಪರಿಣಾಮಗಳ ಕುರಿತ ಕಥೆ ಇದಾಗಿದ್ದು, ಇಲ್ಲಿ ಒಂದಷ್ಟು ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ ಚಿತ್ರತಂಡ. ಚಿತ್ರದ ಕಥೆಯ ಗುಟ್ಟು ರಟ್ಟು ಮಾಡದ ನಿರ್ದೇಶಕರು, ಇಲ್ಲಿ ಹೆಚ್ಚು ಮನಕಲಕುವ ಸನ್ನಿವೇಶಗಳನ್ನಿಟ್ಟಿದ್ದಾರಂತೆ. ಕ್ಲೈಮ್ಯಾಕ್ಸ್ ವೇಳೆ ನೋಡುವ ಕಣ್ಣುಗಳು ಖಂಡಿತವಾಗಿಯೂ ಒದ್ದೆಯಾಗಿರುತ್ತವೆ ಎಂಬ ಗ್ಯಾರಂಟಿ ಚಿತ್ರತಂಡದ್ದು. ಈಗಿನ ಯುವ ಸಮಾಜ ಎತ್ತ ಸಾಗುತ್ತಿದೆ ಎಂಬ ಕಥೆಯಲ್ಲಿ ಸಾಕಷ್ಟು ಏರಿಳಿತಗಳಿವೆಯಂತೆ.
ಪ್ರಖ್ಯಾತ್ ಈ ಚಿತ್ರದ ನಾಯಕ. ಅವರಿಗೆ ತಕ್ಕಂತಹ ಪಾತ್ರ ಸಿಕ್ಕಿದ್ದು ಅವರಿಗೆ ಖುಷಿ ಕೊಟ್ಟಿದೆ. ಇನ್ನು, ಐಶಾನಿ ಶೆಟ್ಟಿ ಈ ಚಿತ್ರದ ನಾಯಕಿ. ಅಂದಹಾಗೆ, ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕೂಡ ನಡೆದಿದೆ. ಸಂಸದ ಡಿ.ಕೆ.ಸುರೇಶ್ ಅವರು ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಕೋರಿದ್ದೂ ಆಗಿದೆ.
ಮಣಿಕಾಂತ್ ಕದ್ರಿ ಈ ಚಿತ್ರದ ಸಂಗೀತ ನಿರ್ದೇಶಕರು. ಈ ಚಿತ್ರದ ಆಡಿಯೋ ಹಕ್ಕನ್ನು ಪಿಆರ್‌ಕೆ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಆಡಿಯೋ ಬಿಡುಗಡೆ ಅಂದಮೇಲೆ ಚಿತ್ರರಂಗದ ಒಂದಷ್ಟು ಮಂದಿ ಸಹಜವಾಗಿಯೇ ಇರುತ್ತಾರೆ. “ನಡುವೆ ಅಂತರವಿರಲಿ’ ಆಡಿಯೋ ಸಿಡಿ ಬಿಡುಗಡೆ ವೇಳೆ ನಿರ್ದೇಶಕ ನರ್ತನ್, ಉದಯ್ ಮೆಹ್ತಾ, ಕೆ.ಪಿ.ಶ್ರೀಕಾಂತ್, ಆನಂದ್ ಇತರರು ಇದ್ದರು. ಈ ಚಿತ್ರವನ್ನು ರವೀನ್‌ಗೌಡ ಮತ್ತು ಜೆ.ಕೆ.ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರ ಅಂತರವನ್ನು ಬೆಸೆಯಲಿದೆ.