ನವದೆಹಲಿ: ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು “ಪ್ರಚಾರ ಮತ್ತು ಅಸಭ್ಯ” ಎಂದು ಹೇಳಿದ್ದ ತೀರ್ಪುಗಾರರ ಮುಖ್ಯಸ್ಥ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ನೀಡಿದ ವಿವಾದಾತ್ಮಕ ಕಾಮೆಂಟ್ ಗಾಗಿ ಕೊನೆಗೂ ಕ್ಷಮೆ ಕೇಳಿದ್ದಾರೆ.
“ದಿ ಕಾಶ್ಮೀರ್ ಫೈಲ್ಸ್ ಕುರಿತಾದ ತನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿದ್ದರೆ ಸಂಪೂರ್ಣವಾಗಿ ಕ್ಷಮೆಯಾಚಿಸುತ್ತೇನೆ. ಕಾಶ್ಮೀರಿ ಪಂಡಿತ ಸಮುದಾಯವನ್ನು ಅಥವಾ ನೋವನ್ನು ಅನುಭವಿಸಿದವರನ್ನು ಅವಮಾನಿಸುವುದು ತನ್ನ ಉದ್ದೇಶವಾಗಿರಲಿಲ್ಲ” ಎಂದು ಹೇಳಿದ್ದಾರೆ.
ಇಫಿನಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರ ಅಧ್ಯಕ್ಷರಾಗಿದ್ದ ಲ್ಯಾಪಿಡ್ ಅವರು ವಿವೇಕ್ ಅಗ್ನಿಹೋತ್ರಿ ಅವರ ಚಲನಚಿತ್ರವನ್ನು “ಅಸಭ್ಯ” ಮತ್ತು “ಪ್ರಚಾರ” ಎಂದು ಹೇಳುವ ಮೂಲಕ ಭಾರಿ ವಿವಾದವನ್ನು ಹುಟ್ಟುಹಾಕಿದ್ದರು.
ಆಕ್ರೋಶದ ಬಳಿಕ “ನಾನು ಯಾರನ್ನೂ ಅವಮಾನಿಸಲು ಬಯಸಲಿಲ್ಲ. ನನ್ನ ಗುರಿ ಎಂದಿಗೂ ಜನರು ಅಥವಾ ಅವರ ಸಂಬಂಧಿಕರನ್ನು ಅವಮಾನಿಸುವುದಾಗಿರಲಿಲ್ಲ, ಅವರು ಅದನ್ನು ಅರ್ಥೈಸಿದ ರೀತಿಯಲ್ಲಿ ನಾನು ಸಂಪೂರ್ಣವಾಗಿ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.
“ಆದರೆ ಅದೇ ವೇಳೆ, ನಾನು ಏನು ಹೇಳಿದ್ದೇನೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಅದು ನನಗೆ ಮತ್ತು ನನ್ನ ಸಹ ಜ್ಯೂರಿ ಸದಸ್ಯರಿಗೆ, ಇದು ಅಸಭ್ಯ ಪ್ರಚಾರದ ಚಲನಚಿತ್ರವಾಗಿದ್ದು, ಅಂತಹ ಪ್ರತಿಷ್ಠಿತ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲ ಎಂದಿದ್ದೆ ಅದನ್ನು ಮತ್ತೆ ಮತ್ತೆ ಪುನರಾವರ್ತಿಸಬಹುದು” ಎಂದು ಅವರು ಹೇಳಿದ್ದಾರೆ.