ಬೆಂಗಳೂರು: ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ನೆನಪು ಅಜರಾಮರಗೊಳಿಸಲು ಹಾಗೂ ಇದಕ್ಕಾಗಿ ಇಡೀ ನಾಡಿನ ಜನತೆಯನ್ನು ಏಕತೆಯ ಭಾವದಲ್ಲಿ ಒಗ್ಗೂಡಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಇದಕ್ಕಾಗಿ 45 ದಿನಗಳ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಒಂದೆರಡು ತಿಂಗಳಲ್ಲಿ 108 ಅಡಿ ಎತ್ತರದ ಕೆಂಪೇ ಗೌಡರ ಕಂಚಿನ ಪ್ರತಿಮೆಯಾಗಲಿದ್ದು ಇದಕ್ಕೆ ಪೂರ್ವ ಭಾವಿಯಾಗಿ ‘ಉದ್ಘಾಟನಾ ಅಭಿಯಾನ’ ನಡೆಸಲಿದೆ. ಸೆ.1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಹಸಿರು ನಿಶಾನೆ ಕಾಣಲಿರುವ ಅಭಿಯಾನವು ರಾಜ್ಯದ 31 ಜಿಲ್ಲೆಗಳಲ್ಲೂ ನಡೆಯಲಿದೆ. ಇದಕ್ಕೆ ಪೂರಕವಾಗಿ ಅದು “ನಾಡ ಕಟ್ಟೋಣ ಬನ್ನಿ’ ಘೋಷವಾಕ್ಯ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರೂಪಿಸಿದೆ.
ಅಭಿಯಾನದ ಅಡಿಯಲ್ಲಿ ಎಲ್ಲ ಜಿಲ್ಲೆಗಳ ಪ್ರತಿ ಹಳ್ಳಿಯ ಪವಿತ್ರ ಮೃತ್ತಿಕೆ (ಮಣ್ಣು) ಆಯಾ ಊರುಗಳಲ್ಲಿ ರುವ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಕೊಳ, ಚಿಲುಮೆ ಮತ್ತು ಝರಿಗಳಿಂದ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ನಾಡಿನ ಉದ್ದಗಲಕ್ಕೂ ಇರುವ ಅನುಕರಣೀಯ ಸಾಧಕರ ಮನೆಗಳಿಂದಲೂ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಬೃಹತ್ ಎಲ್‌ಇಡಿ ಪರದೆಯನ್ನು ಅಳ ವಡಿಸಿರುವ ತಲಾ ಒಂದು ವಾಹನವನ್ನು ಪ್ರತಿ ಜಿಲ್ಲೆಗೂ ನಿಯೋಜಿಸಲಾಗುವುದು. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ, ಸಚಿವ ಮತ್ತು ಈ ಪರಿಕಲ್ಪನೆಯ ರೂವಾರಿ ಡಾ.ಸಿ.ಎನ್. ಅಶ್ವತ್ಥ ನಾರಾ ಯಣ ಮತ್ತು ನಾಡಿನ ಪ್ರಮುಖ ಸ್ವಾಮೀಜಿಗಳ ಸಂದೇಶಗಳು ಬಿತ್ತರವಾಗಲಿವೆ.
ಜೊತೆಗೆ, ಕೆಂಪೇಗೌಡರಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರವೂ ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಎಲ್ಲ ಜಿಲ್ಲೆಗಳಲ್ಲೂ ಇರುವ ಮಠ ಮಾನ್ಯ ಗಳ ಶ್ರೀಗಳು, ದೇವಸ್ಥಾನಗಳು, ಸ್ವಾತಂತ್ರ ಹೋರಾಟ ಗಾರರು, ತಾರಾ ವರ್ಚಸ್ಸಿನ ಸಾಧಕರನ್ನು ಕೂಡ ಒಳ ಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಳ್ಳಿಗಳಲ್ಲಿ ನಡೆಯಲಿರುವ “ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ’ವು ಗಿನ್ನಿಸ್ ದಾಖಲೆಯಾಗ ಲಿದೆ. ಈ ಅಭಿಯಾನ ನಡೆಯುವ ಒಂದೂವರೆ ತಿಂಗಳುದ್ದಕ್ಕೂ ರಾಜ್ಯದ 10 ಸಾವಿರ ದೇಗುಲಗಳಲ್ಲಿ ನಂದಾದೀಪಗಳು ಪ್ರಜ್ವಲಿಸಲಿದೆ.
ಸೆ.1ರ ಗುರುವಾರ ದೇವನಹಳ್ಳಿಯ ವಿಮಾನ ನಿಲ್ದಾಣದ ಬಳಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ, ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ, ವಿಮಾನ ನಿಲ್ದಾಣದ ಸಮುಚ್ಚಯದಲ್ಲಿ ತಲೆ ಎತ್ತುತ್ತಿರುವ ಕೆಂಪೇಗೌಡರ ಭವ್ಯವಾದ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸುವುದು ಸರ್ಕಾರದ ಉದ್ದೇಶ ಎಂದು ಹೇಳಲಾಗಿದೆ.
ನಾಡಪ್ರಭು ಕೆಂಪೇಗೌಡರೆಂದರೆ ಪ್ರಗತಿ ಮತ್ತು ಅಭ್ಯುದಯದ ನಾಗಾಲೋಟ ಕ್ಕೊಂದು ಸಂಕೇತ. ಅವರು ಒಂದು ದಿವ್ಯವಾದ ಘಳಿಗೆಯಲ್ಲಿ ಬೆಂಗಳೂರಿನ ಸ್ಥಾಪನೆಗೆ ಶ್ರೀಕಾರ ಹಾಕಿದರು. ಇದರ ಫಲವಾಗಿ ಬೆಂಗಳೂರು ಇಂದು ವಿಶ್ವ ಮಟ್ಟದಲ್ಲಿ ರಾರಾಜಿಸುತ್ತಿದೆ. ಹೀಗಾಗಿಯೇ, ಈ ಪ್ರತಿಮೆಗೆ ‘ಪ್ರಗತಿ ಪ್ರತಿಮೆ’ ಎಂದು ಹೆಸರಿಡಲಾಗುತ್ತಿದೆ.
– ಡಾ.ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ ಹಾಗೂ ಉಪಾಧ್ಯಕ್ಷರು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ