ಬೆಂಗಳೂರು: ಹೆಬ್ಟಾಳ ಮೇಲ್ಸೇತುವೆ ಉದ್ಯಾನದ ಆವರಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ನಾಡುಪ್ರಭು ಕೆಂಪೇಗೌಡರ ಪ್ರತಿಮೆ ಸೋಮವಾರ ಅನಾವರಣಗೊಂಡಿತು. ತಾಮ್ರ ಮತ್ತು ಹಿತ್ತಾಳೆ ಮಿಶ್ರಿತ 8.35 ಮೀಟರ್ ಎತ್ತರದ ಪ್ರತಿಮೆಯನ್ನು 46.58 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಕೃಷಿ ಸಚಿವ ಕೃಷ್ಣ
ಬೈರೇಗೌಡ ಪ್ರತಿಮೆಯನ್ನು ಅನಾವರಣ ಗೊಳಿಸಿದರು.
ನಂತರ ಮಾತನಾಡಿದ ಕೆ.ಜೆ. ಜಾರ್ಜ್, ನಾಡಪ್ರಭು ಕೆಂಪೇಗೌಡರು ಕೇವಲ ಒಕ್ಕಲಿಗರಿಗೆ ಸೀಮಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕೆಂಪೇಗೌಡರ ಜಯಂತಿ, ಕೆಂಪೇಗೌಡ ಪ್ರಶಸ್ತಿ, ಕೆಂಪೇಗೌಡ ಪ್ರಾಧಿಕಾರ ರಚಿಸಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆಂಪೇಗೌಡರ ಹೆಸರಿನಲ್ಲಿ ವಿವಿ ಸ್ಥಾಪನೆಗೆ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಮಾಗಡಿಯಲ್ಲಿ ಐದು ಎಕರೆ ಜಾಗ ನೀಡಲಾಗಿದೆ ಎಂದರು.
ಕೃಷಿ ಸಚಿವ ಕೃಷ್ಣಭೈರೇಗೌಡ ಮಾತ ನಾಡಿ, ಕೆಂಪೇಗೌಡ ಪ್ರತಿಮೆ ಅನಾವರಣ ವಾಗಿರುವುದು ಈ ಭಾಗದ ಜನರ ಬಹುದಿನಗಳ ಆಸೆ ಈಡೇರಿದಂತಾಗಿದೆ. ಮೂರೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉದ್ಯಾನದ ಕಾಮಗಾರಿ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.