ಮ್ಯಾಡ್ರಿಡ್: ಮರಳಿ ಫಿಟ್‌ನೆಸ್ ಪಡೆದಿರುವ ರಫೆಲ್ ನಡಾಲ್, “ಮ್ಯಾಡ್ರಿಡ್ ಓಪನ್’ ಪಂದ್ಯಾವಳಿಯಲ್ಲಿ ದ್ವಿತೀಯ ಸುತ್ತು ತಲುಪಿದ್ದಾರೆ. ಅಮೆರಿಕದ 16 ವರ್ಷದ ಎಳೆಯ ಎದುರಾಳಿ ಡಾರ್ವಿನ್ ಬ್ಲ್ಯಾಂಕ್ ಎದುರಿನ ಪಂದ್ಯವನ್ನು ನಡಾಲ್ 6-1, 6-0 ಅಂತರದಿಂದ ಸುಲಭದಲ್ಲಿ ಗೆದ್ದರು.
ಇದು ಎಟಿಪಿ 1000 ಟೆನಿಸ್ ಇತಿಹಾಸದ ಆಟಗಾರರಿಬ್ಬರ ಸುದೀರ್ಘ ವಯಸ್ಸಿನ ಅಂತರದ ಪಂದ್ಯವಾಗಿದೆ. ನಡಾಲ್ ಮತ್ತು ಬ್ಲ್ಯಾಂಕ್ ನಡುವಿನ ವಯಸ್ಸಿನ ಅಂತರ 21 ವರ್ಷ, 117 ದಿನಗಳಾಗಿವೆ.
ಕಳೆದ ವಾರದ ಬಾರ್ಸಿಲೋನಾ ಟೆನಿಸ್ ಟೂರ್ನಿ ಮೂಲಕ ನಡಾಲ್ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗಿದ್ದರು. ಆದರೆ ಇಲ್ಲಿ ಎರಡನೇ ಸುತ್ತಿನಲ್ಲೇ ಅಲೆಕ್ಸ್ ಡಿ ಮಿನೌರ್ ವಿರುದ್ಧ ಪರಾಭವಗೊಂಡಿದ್ದರು. ಕಾಕತಾಳೀಯವೆಂದರೆ, ಮ್ಯಾಡ್ರಿಡ್ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲೂ ಅಲೆಕ್ಸ್ ಡಿ ಮಿನೌರ್ ಅವರೇ ರಫೆಲ್ ನಡಾಲ್ ಎದುರಾಳಿ ಆಗಿರುವುದು!
ಸ್ವಿಯಾಟೆಕ್ ಮುನ್ನಡೆ
ವನಿತಾ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಇಗಾ ಸ್ವಿಯಾಟೆಕ್ 3ನೇ ಸುತ್ತು ಪ್ರವೇಶಿಸಿದ್ದಾರೆ. ಅವರು ವಾಂಗ್ ಕ್ಸಿಯು ವಿರುದ್ಧ 6-1, 6-4 ಅಂತರದ ಗೆಲುವು ಸಾಧಿಸಿದರು. ಇದು ಕ್ಸಿಯು ವಿರುದ್ಧ ಸ್ವಿಯಾಟೆಕ್ ಸಾಧಿಸಿದ ಮೊದಲ ಗೆಲುವು.