ಬಾರ್ಸಲೋನ: ಸ್ಪೇನ್‌ನ ರಫೆಲ್ ನಡಾಲ್ ಅವೆ ಅಂಗಣದಲ್ಲಿ ತನ್ನ ಬಾಳ್ವೆಯ 400ನೇ ಗೆಲುವು ದಾಖಲಿಸಿದ್ದಾರೆ. ಬೆಲ್ಜಿಯಂನ ಡೇವಿಡ್ ಗೋಫಿನ್ ಅವರನ್ನು 6-4, 6-0 ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ನಡಾಲ್ ಈ ಸಾಧನೆ ಮಾಡಿದ್ದಾರಲ್ಲದೇ ಬಾರ್ಸಲೋನ ಓಪನ್ ಟೆನಿಸ್ ಕೂಟದ ಫೈನಲ್ ಹಂತಕ್ಕೇರಿದರು. ಇನ್ನೊಂದು ಪಂದ್ಯ ಗೆದ್ದರೆ ಅವರು ಇಲ್ಲಿ 11ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಲಿದ್ದಾರೆ.
ಕಳೆದೊಂದು ದಶಕದಿಂದ ಕೆಂಪು ಮಣ್ಣಿನ ಅಂಗಣದಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ನಡಾಲ್ ಅವರು ಮೂರನೇ ಬಾರಿ ಗೋಫಿನ್ ಅವರನ್ನು ಸೋಲಿಸಿ ತನ್ನ ಸತತ ಗೆಲುವಿನ ಓಟವನ್ನು 44 ಪಂದ್ಯಕ್ಕೆ ವಿಸ್ತರಿಸಿದ್ದಾರೆ.
ಫೈನಲ್ ಹೋರಾಟದಲ್ಲಿ 31ರ ಹರೆಯದ ವಿಶ್ವದ ನಂಬರ್ ವನ್ ನಡಾಲ್ ಅವರು ಗ್ರೀಕ್‌ನ ಹದಿಹರೆಯದ ಸ್ಟೆಫಾನೋಸ್ ಸಿಟ್ಸೆಪಾಸ್ ಅವರನ್ನು ಎದುರಿಸಲಿದ್ದಾರೆ. ನಡಾಲ್ ಕಳೆದ ವಾರ ಮಾಂಟೆ ಕಾರ್ಲೊ ಟೆನಿಸ್ ಕೂಟದ ಪ್ರಶಸ್ತಿಯನ್ನು 11ನೇ ಬಾರಿ ಗೆದ್ದುಕೊಂಡಿದ್ದರು.
ನನಗೆ ಬಹಳಷ್ಟು ಖುಷಿಯಾಗುತ್ತಿದೆ ಎಂದು ನಡಾಲ್ ಪಂದ್ಯದ ಬಳಿಕ ನುಡಿದರು. ಅವರು ಇಲ್ಲಿ 11ನೇ ಬಾರ್ಸಲೋನ ಮತ್ತು ಬಾಳ್ವೆಯ 77ನೇ ಪ್ರಶಸ್ತಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಆವೆ ಅಂಗಣದಲ್ಲಿ ನಡಾಲ್ ಅವರ 400 ಪಂದ್ಯ ಗೆಲುವು ಸಾರ್ವಕಾಲಿಕವಾಗಿ ನಾಲ್ಕನೇ ಶ್ರೇಷ್ಠ ನಿರ್ವಹಣೆಯಾಗಿದೆ. ಆರ್ಜೆಂಟೀನಾದ ಗೈಲೆರ್ಮೊ ವಿಲಾಸ್ ಗರಿಷ್ಠ 659 ಪಂದ್ಯಗಳಲ್ಲಿ ಜಯ ಸಾಧಿಸಿದ ದಾಖಲೆ ಹೊಂದಿದ್ದರೆ ಸ್ಪೇನ್‌ನ ಮಾನ್ಯುಯೆಲ್ ಒರಾಂಟೆಸ್ 502 ಮತ್ತು ಆಸ್ಟ್ರೀಯದ ಥಾಮಸ್ ಮಸ್ಟರ್ 422 ಪಂದ್ಯಗಳಲ್ಲಿ ಜಯ ಸಾಧಿಸಿದ ಸಾಧನೆ ಮಾಡಿದ್ದಾರೆ.