ಕಲಬುರಗಿ: ಜಿಲ್ಲೆಯ ಅಫಜಲಪುರ ಹಾಗೂ ಆಳಂದ ತಾಲೂಕಿನಲ್ಲಿ ಅವ್ಯಾಹುತವಾಗಿ ಗನ್‌ಗಳ ಮಾರಾಟ ನಡೆಯುತ್ತಿದೆ ಎಂಬ ಸಾರ್ವಜನಿಕ ಟೀಕೆ-ಆರೋಪ ನಡುವೆ ಪೊಲೀಸರು ತೀವ್ರ ತನಿಖೆ ನಡೆಸಿ, ಗನ್ ಮಾರಾಟಗಾರರ ಜಾಲವನ್ನು ಬಯಲಿಗೆಳೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಅಫಜಲಪುರ-ದುಧನಿ ರಸ್ತೆಯಲ್ಲಿರುವ ಹಳಾಳ ಕ್ರಾಸ್ ಹತ್ತಿರ ನಾಡ ಪಿಸ್ತೂಲ್ ವ್ಯವಹಾರ ಮಾಡುತ್ತಿದ್ದ ಐವರನ್ನು ಬಂಧಿಸಿ ನಾಲ್ಕು ನಾಡಪಿಸ್ತೂಲುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಳಂದ ತಾಲೂಕಿನ ಝಳಕಿ ಗ್ರಾಮದ ಸೈಫನಸಾಬ್ ಹುಸೇನಸಾಬ ಶಿರೂರ, ಪಂಡಿತ ಬಸಣ್ಣ ಬನಶೆಟ್ಟಿ, ಅಫಜಲಪುರ ತಾಲೂಕಿನ ಅತನೂರ ಗ್ರಾಮದ ಸೈಫನಸಾಬ್ ಅಬ್ದುಲ್ ರವೂಫ್ ಬಾಗವಾನ್, ಶಿವಕುಮಾರ ಸಿದ್ಧರಾಮ ಹುಲಿ ಹಾಗೂ ದೇವಲ್ ಗಾಣಗಾಪುರದ ಮಲ್ಲಿಕಾರ್ಜುನ ಶಾಂತಪ್ಪ ಹೊಸಮನಿ ಎಂಬ ಆರೋಪಿಗಳನ್ನೇ ಬಂಧಿಸಿ ನಾಲ್ಕು ನಾಡಪಿಸ್ತೂಲು ಹಾಗೂ ಐದು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ಬಳಿ ನಾಡಪಿಸ್ತೂಲು ತೋರಿಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬುರಗಿಯ ಮಾರ್ಕೆಟ್ ಸತೀಶನನ್ನು ಬಂಧಿಸಿ ವಿಚಾರಣೆ ಮಾಡಿದಾಗ ನಾಡಪಿಸ್ತೂಲು ಅಫಜಲಪುರ ತಾಲೂಕಿನಿಂದಲೇ ಪೂರೈಕೆಯಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ದಾಳಿ ನಡೆಸಿದಾಗ ಈ ಜಾಲ ಬಯಲಿದೆ ಬಂದಿದೆ. ಝಳಕಿಯ ಸೈಫನ್‌ಸಾಬ್ ಶಿರೂರ ಈ ಹಿಂದೆಯೂ ನಾಡಪಿಸ್ತೂಲ್ ಮಾರಾಟ ದಂಧೆ ಹಿನ್ನೆಲೆಯಲ್ಲಿ ಸೆರೆ ಸಿಕ್ಕಿದ್ದ.
ಇವುಗಳನ್ನು ಮಧ್ಯಪ್ರದೇಶದ ತಪನಸಿಂಗ್ ಎಂಬಾತನಿಂದ ಪಡೆದಿದ್ದಾರೆ ಎನ್ನಲಾಗುತ್ತಿದೆ. ಎಲ್ಲ ಹಂತದಿಂದ ತನಿಖೆ ನಡೆಯುತ್ತಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 23 ನಾಡಪಿಸ್ತೂಲು, 21 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಪೇದೆ ಅಮಾನತು: ಅಕ್ರಮ ಆಸ್ತಿ ಹೊಂದಿದ ಆರೋಪ ಹಾಗೂ ಅಕ್ರಮ ಮರಳುಗಾರಿಕೆಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇರೆಗೆ ಎಸಿಬಿ ದಾಳಿಗೆ ಒಳಗಾದ ಸಂಚಾರಿಯ ಮುಖ್ಯಪೇದೆ ಕನಕರೆಡ್ಡಿ ಯಾದವ್ ನನ್ನು ಅಮಾನತುಗೊಳಿಸಿ, ಇಲಾಖೆಯಿಂದ ತನಿಖೆ ನಡೆಸಲಾಗುತ್ತಿದೆ ಎಂದರು. ಆಳಂದ ಡಿವೆಎಸ್ಪಿ ಪಿ.ಡಿ.ಗಜಕೋಶ, ಅಪಜಲಪುರ ಸಿಪಿಐ ಸಂಗಮೇಶ ಪಾಟೀಲ ಇದ್ದರು.