ಮಂಗಳೂರು: ಸಮಾಜದಲ್ಲಿ ಬದಲಾವಣೆ ತಂದು ಸ್ನೇಹ ಪ್ರೀತಿಯ ವಾತಾವರಣ ಮೂಡಿಸಬೇಕಿದ್ದರೆ ಅದು ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಹೇಳಿದರು.
ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್)ದ ವತಿಯಿಂದ ಸೋಮವಾರ ನಗರದ ಪುರಭವನದಲ್ಲಿ ಆಯೋಜಿಸಲಾದ ಒಕ್ಕೂಟದ ಸಮಾವೇಶ, ತಾಂತ್ರಿಕ ಅಧಿವೇಶನ, ಅಂತರ್‌ಶಾಲಾ ಪ್ರತಿಭಾ ಸ್ಪರ್ಧೆ, ಆಡಳಿತ ಮಂಡಳಿಗಳು ಮತ್ತು ಅಭಿಮಾನಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಇದ್ದ ಪರಿಸ್ಥಿತಿಗೂ ಈಗ ಇರುವ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ವ್ಯಕ್ತಿಗಳ ನಡುವೆ ದ್ವೇಷ ಪೂರಿತ ವಾತಾವರಣ ಕಾಣುತ್ತಿದ್ದೇವೆ. ದ್ವೇಷ ಮನಸ್ಸಿನಲ್ಲಿದ್ದರೆ ವ್ಯಕ್ತಿ ಅತೃಪ್ತನಾಗಿಯೇ ಇರುತ್ತಾನೆ. ಆದರೆ ಪ್ರೀತಿಯಿದ್ದರೆ ಉತ್ಕೃಷ್ಟತೆ ಬರುತ್ತದೆ. ಆದ್ದರಿಂದ ಪ್ರೀತಿಯಿಂದ ಸಮಾಜ ಕಟ್ಟುವ ಅಗತ್ಯವಿದೆ. ಮೀಫ್ ಒಕ್ಕೂಟ ಇಂದು ಬಹಳಷ್ಟು ಬಲಯುತವಾಗಿದ್ದು, ಶಾಲಾ-ಕಾಲೇಜುಗಳು ಮಾತ್ರವದಲ್ಲದೆ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳೂ, ಮೀಫ್ ಒಕ್ಕೂಟದಡಿಯಿದ್ದು, ಎಲ್ಲ ಜಾತಿ ಧರ್ಮದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಯೇನೇಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ವೈ.ಅಬ್ದುಲ್ಲ ಕುಂಞಿ ಅವರು ಮಾತನಾಡಿ, ಅಲ್ಪಸಂಖ್ಯಾಕ ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆಗಳ ಕಾನೂನು ಬದ್ಧ ಹಕ್ಕುಗಳನ್ನು ಕಾಪಾಡುವಲ್ಲಿ ಮೀಫ್ ಪ್ರಮುಖ ಪಾತ್ರ ವಹಿಸಿದೆ. ಶೈಕ್ಷಣಿಕವಾಗಿ ಹಿಂದುಳಿದಿದ್ದ ಸಮುದಾಯ ಇಂದು ಸಾಕಷ್ಟು ಮುನ್ನೆಲೆಗೆ ಬಂದಿದೆ. ಶಿಕ್ಷಣ ಮಾನವ ಕುಲದ ಅವಿಭಾಜ್ಯ ಅಂಗವಾಗಿದ್ದು, ಪ್ರತಿ ಮಗುವೂ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು ಎಂದರು.
ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್, ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಹ್ಯೂಮನ್ ಮೈಂಡ್‌ಸೆಟ್ ಕೋಚ್ ಮಹೇಶ್ ಮಸಾಲ್, ಬೆಂಗಳೂರಿನ ಎಲ್‌ಎಕ್ಸ್‌ಎಲ್ ಮುಖ್ಯಸ್ಥ ಸಯ್ಯದ್ ಸುಲ್ತಾನ್ ಅಹ್ಮದ್, ಒಕ್ಕೂಟದ ಉಪಾಧ್ಯಕ್ಷರಾದ ಬಿ.ಎಂ.ಮುಮ್ತಾಝ್ ಅಲಿ, ಕೆ.ಎಂ.ಮುಸ್ತಾಫ ಸುಳ್ಯ, ಶಾಬಿ ಅಹ್ಮದ್ ಖಾಝಿ, ಪ್ರಧಾನ ಕಾರ್ಯದರ್ಶಿ ಬಿ.ಎ.ನಝೀರ್, ಖಜಾಂಚಿ ಅಬ್ದುಲ್ ರಹಿಮಾನ್, ಜತೆ ಕಾರ್ಯದರ್ಶಿಗಳಾದ ರಿಯಾಝ್ ಅಹಮ್ಮದ್ ಕೆ.ಬಿ., ಪಿ.ಎ. ಇಲ್ಯಾಸ್, ಬಿ.ಮಯ್ಯದ್ದಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಉಮರ್ ಟೀಕೆ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸಯ್ಯಿದ್ ಮೊಹಮ್ಮದ್ ಬ್ಯಾರಿ ಅತಿಥಿಗಳನ್ನು ಪರಿಚಯಿಸಿದರು. ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಸ್ವಾಗತಿಸಿದರು.
ದಿನವಿಡೀ ನಡೆದ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಾಗಾರ, ಮೀಫ್ ಇಂಟರ್ ಸ್ಕೂಲ್ ಟ್ಯಾಲೆಂಟ್ ಹಂಟ್- 2022-23 ಅಂತಿಮ ಸುತ್ತಿನ ಸ್ಪರ್ಧೆ ಹಾಗೂ ಬಹುಮಾನ ವಿತರಣೆ, ಮ್ಯಾನೇಜ್‌ಮೆಂಟ್ ಮೀಟ್, ಕಾನೂನು ಸಲಹೆ, ಉಪನ್ಯಾಸ, ಒಕ್ಕೂಟದ ಅಭಿಮಾನಿಗಳ ಸಮಾವೇಶ ಮೊದಲಾದ ಕಾರ್ಯಕ್ರಮಗಳು ಜರುಗಿತು.