ಬೆಂಗಳೂರು: ಪ್ರತಿ ವಿಷಯಕ್ಕೂ ಸಿಎಂ ರಾಜೀನಾಮೆ ಕೇಳುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬಾಲಿಶ ವರ್ತನೆ; ಇದು ಕಾಂಗ್ರೆಸ್ ಪಕ್ಷದ ಟೂಲ್ ಕಿಟ್‍ನ ಒಂದು ಭಾಗ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಖಂಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತದಾರರ ಜಾಗೃತಿ ಮತ್ತು ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದ ವಿಷಯದಲ್ಲಿ ಮುಖ್ಯಮಂತ್ರಿಯವರ ರಾಜೀನಾಮೆ ನೀಡುವುದು ಅಥವಾ ಕೇಳುವುದು ದೂರದ ಸಂಗತಿ ಎಂದು ಅವರು ಸ್ಪಷ್ಟಪಡಿಸಿದರು.
ಮತದಾರರ ಮಾಹಿತಿ ಸಂಗ್ರಹ ಮತ್ತು ಮತದಾರರ ಜಾಗೃತಿಯ ಕಾರ್ಯವನ್ನು ‘ಚಿಲುಮೆ’ ಸಂಸ್ಥೆಗೆ 2018ರಲ್ಲಿ ಸಮ್ಮಿಶ್ರ ಸರಕಾರ ಕೊಟ್ಟಿತ್ತು. ಟೆಂಡರನ್ನು ಕರೆಯದೆ ಈ ಕೆಲಸವನ್ನು ನೀಡಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಕೆಲಸ ನೀಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಹಾಗಿದ್ದರೆ ರಾಜೀನಾಮೆ ಕೊಡಬೇಕಾದವರು ಯಾರು? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕು. ಇದರಲ್ಲೇನೂ ಅವ್ಯವಹಾರ ಆಗಿಲ್ಲ. ಬಿಎಲ್‍ಒಗಳಿಗೆ ಐಡಿ ಕೊಟ್ಟ ವಿಚಾರ ಗೊತ್ತಾದೊಡನೆ ಚಿಲುಮೆ ಸಂಸ್ಥೆಗೆ ಕೊಟ್ಟಿದ್ದ ಆದೇಶವನ್ನು ಬಿಬಿಎಂಪಿ ಹಿಂದಕ್ಕೆ ಪಡೆದಿದೆ ಎಂದು ಸ್ಪಷ್ಟಪಡಿಸಿದರು.
2018ರಲ್ಲಿ ಒಂದು ದಿನಕ್ಕೆ 5 ಸಾವಿರ ರೂಪಾಯಿಯಂತೆ ಈ ಸಂಸ್ಥೆಗೆ ಕೊಟ್ಟಿದ್ದಾರೆ. ಬಿಬಿಎಂಪಿ ಕಡೆಯಿಂದ ಲ್ಯಾಪ್ ಟಾಪ್ ಕೊಟ್ಟಿದ್ದು, ಜಾಗೃತಿ ಮೂಡಿಸಲು ಬೇಕಿದ್ದ ಕರಪತ್ರಗಳು, ಬ್ಯಾನರ್ ಗಳು, ಶಾಮಿಯಾನ ಮೈಕ್ ವ್ಯವಸ್ಥೆಗೆ ಸ್ವಲ್ಪ ಹಣ ಖರ್ಚು ಮಾಡಿದ್ದಾರೆ. ಇದರಲ್ಲಿ ಅವ್ಯವಹಾರ ಆಗಿದ್ದರೆ, ನ್ಯೂನತೆ ಇದ್ದರೆ ಪೊಲೀಸ್ ಕಮಿಷನರ್ ಗೆ ದೂರು ಕೊಡಲಾಗುತ್ತದೆ. ಅಗತ್ಯ ಕ್ರಮ ತೆಗೆದುಕೊಳ್ಳಲು ಸರಕಾರ ನಿರ್ಧರಿಸಿದೆ ಎಂದು ವಿವರಿಸಿದರು.
2018ರಲ್ಲಿ ಆದೇಶ ನೀಡಿದಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬಾಳೆಹಣ್ಣು ತಿನ್ನುತ್ತಿದ್ದರೇ ಎಂದೂ ಅವರು ಪ್ರಶ್ನಿಸಿದರು. ಅಕ್ರಮದ ತನಿಖೆ ಆಗಲಿ; ಉಪ್ಪು ತಿಂದವನು ನೀರು ಕುಡಿಯಲಿ ಎಂದು ಅವರು ಈ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದರು.