ಎನ್.ಆರ್.ಪುರ: ತಾಲೂಕಿನ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುರಿದ ಭಾರಿ ಗಾಳಿ, ಮಳೆಗೆ ಬೆಳೆ ಮತ್ತು ಮನೆಗಳಿಗೆ ಹಾನಿ ಸಂಭವಿಸಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಬಂದಿದ್ದರೂ ಸಹ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಭಾರಿ ಗಾಳಿ,ಮಳೆ ಸುರಿದಿದೆ. ಮಲ್ಲಿಕೊಪ್ಪ ಗ್ರಾಮದಲ್ಲಿ ರನ್ನಿ ಎಂಬ ರೈತ ತೋಟದಲ್ಲಿ ಬೆಳೆದಿದ್ದ ಫಸಲು ಬಿಟ್ಟಿದ್ದ 3,800 ನೆಂದ್ರ ಬಾಳೆಯಲ್ಲಿ 3,600ಕ್ಕೂ ಹೆಚ್ಚು ನೆಂದ್ರ ಬಾಳೆಗಿಡ ಸಂಪೂರ್ಣ ಮುರಿದು ಲಕ್ಷಾಂತರೂ ನಷ್ಟ ಸಂಭವಿಸಿದೆ.
ಬಾಳೆ ಬೆಳೆಯಲು 6ಲಕ್ಷಕ್ಕೂ ರೂ. ವೆಚ್ಚ ಮಾಡಲಾಗಿತ್ತು. ಇನ್ನೂ 20 ದಿನದಲ್ಲಿ ಬಾಳೆ ಫಸಲು ಕೊಯ್ಯಬಹುದಿತ್ತು. ಭಾರಿ ಗಾಳಿಯಿಂದ ಬೆಳೆ ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ಎಂದು ರೈತ ರನ್ನಿ ಬೇಸರ ವ್ಯಕ್ತಪಡಿಸಿದರು. ಇದೇ ಗ್ರಾಮದ ವ್ಯಾಪ್ತಿಯ ಪಿ.ಸಿ.ವರ್ಗೀಸ್ ಅವರ ರಬ್ಬರ್ ತೋಟದಲ್ಲಿ ಗಾಳಿಗೆ 65ಕ್ಕೂ ಹೆಚ್ಚು ರಬ್ಬರ್ ಮರ ತುಂಡಾಗಿ ಧರೆಗುರುಳಿಬಿದ್ದಿವೆ.
ಸಾಕಷ್ಟು ನೆದ್ರ ಬಾಳೆಯು ಸಹ ನೆಲ ಕಚ್ಚಿದೆ. ಅದೇ ರೀತಿ ಸಂತೋಷ್ ಅವರ ರಬ್ಬರ್ ತೋಟದಲ್ಲಿ ಹೊಸದಾಗಿ ರಬ್ಬರ್ ಟ್ಯಾಪಿಂಗ್ ಮಾಡಲು ಸಿದ್ಧವಾಗಿದ್ದ 200ಕ್ಕೂ ಹೆಚ್ಚು ರಬ್ಬರ್ ಮರಗಳನ್ನು ಧರೆಗುರುಳಿ ಬಿದ್ದಿದ್ದು, ಭಾರೀ ನಷ್ಟ ಸಂಭವಿಸಿದೆ. ಕೆ.ಕಣಬೂರು ವ್ಯಾಪ್ತಿಯ ಚಂಬಳ್ಳಿಯಲ್ಲಿ ಎಂ.ವಿ.ಬೇಬಿ ಯವರು ಬೆಳೆದಿದ್ದ 900 ನೆಂದ್ರ ಬಾಳೆ ಧರೆಗುಳಿದು ಬಿದ್ದು ಲಕ್ಷಾಂತರ ರೂ. ನಷ್ಟಸಂಭವಿಸಿದೆ. ಮಡಬೂರು ಸಮೀಪದ ಎಕ್ಕಡಬೈಲು ಗ್ರಾಮದ ಹೂವಣ್ಣ ಎಂಬುವರ ಮನೆಯ ಮೇಲೆ ಗಾಳಿಗೆ ಮರ ಬಿದ್ದು ಮನೆಯ ಹೆಂಚು ಮತ್ತು ಮಾಡು ಪುಡಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿದ್ದು, ಭಾರಿ ಅನಾಹುತ ತಪ್ಪಿದೆ.
ಸಾತ್ಕೋಳಿ ಗ್ರಾಮದ ಶೇಖರ್ ಮತ್ತು ಮಧು ಎಂಬುವರ ಮನೆ ಶೀಟ್ ಮತ್ತು ಹೆಂಚು ಗಾಳಿಗೆ ಹಾರಿಹೋಗಿದ್ದು ಗೋಡೆಗಳು ಬಿರುಕು ಬಿಟ್ಟು ಮನೆ ಕುಸಿಯುವ ಹಂತ ತಲುಪಿವೆ. ಮಲ್ಲಿಕೊಪ್ಪ ಗ್ರಾಮದ ಪುಷ್ಪ ಎಂಬುವರ ಮನೆಯ 12 ಶೀಟ್ ಗಳು ಗಾಳಿಗೆ ಹಾರಿ ಹೋಗಿ ಪುಡಿಯಾಗಿದ್ದು ಹಲವು ಶೀಟ್‌ಗಳು ಬಿರುಕು ಬಿಟ್ಟಿದ್ದು ಸಾಕಷ್ಟು ನಷ್ಟ ಸಂಭವಿಸಿದೆ. ಇದೇ ಗ್ರಾಮದ ಸಂತೋಷ್ ಎಂಬುವರ ಮನೆಯ ಶೀಟ್ ಸಹ ಹಾರಿ ಹೋಗಿದೆ. ಕುಶಾಲಪುರದ ಕೆ.ಎಸ್.ಸತ್ಯನಾರಾಯಣ ಅವರು ಕೂಯ್ಲಿಗೆ ಬಂದಿರುವ ಭತ್ತದ ಪೈರಿನ ತೆನೆ ಗಾಳಿ, ಮಳೆಗೆ ಉದುರಿಬಿದ್ದಿದ್ದು ನಷ್ಟ ಉಂಟಾಗಿದೆ.
ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್. ಸದಾಶಿವ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುತ್ತಿನಕೊಪ್ಪ ಗ್ರಾಪಂ ಅಧ್ಯಕ್ಷ ಸೈಯದ್ ಸಫೀರ್ ಅಹಮ್ಮದ್, ಕಡಹಿನಬೈಲು ಗ್ರಾಪಂ ಸದಸ್ಯ ಎ.ಎಲ್. ಮಹೇಶ್, ಕಂದಾಯ ನಿರೀಕ್ಷಕ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಅಕಾಲಿಕ ಭಾರಿ ಗಾಳಿ ಮಳೆಯಿಂದ ರೈತರು ಬೆಳೆದಿದ್ದ ಫಸಲು ನಷ್ಟವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಪಂ ಸದಸ್ಯ ಪಿ.ಆರ್.ಸದಾಶಿವ ಆಗ್ರಹಿಸಿದ್ದಾರೆ.