ನವದೆಹಲಿ: ಐಸಿಸ್ ಉಗ್ರರ ವಿರುದ್ಧ ಹೋರಾಡಲು ಫಿಲಿಪ್ಪೀನ್ಸ್ ಗೆ ಭಾರತ ಸರ್ಕಾರ 500,000 ಡಾಲರ್ (ಸುಮಾರು 3.2 ಕೋಟಿ) ಆರ್ಥಿಕ ನೆರವನ್ನು ನೀಡಿದೆ. ದಕ್ಷಿಣ ಮನಿಲಾದಿಂದ 800 ಕಿಲೋ ಮೀಟರ್ ದೂರದಲ್ಲಿರುವ ಮಾರಾವಿ ನಗರದಲ್ಲಿ ಐಸಿಸ್ ಬೆಂಬಲಿತ ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿವೆ.
ಕ್ರೂರಿ ಭಯೋತ್ಪಾದಕ ಸಂಘಟನೆಗಳಿಂದ ರಕ್ಷಿಸಿಕೊಳ್ಳುವ ನೆಲೆಯಲ್ಲಿ ಪ್ರಥಮ ಬಾರಿಗೆ ಭಾರತ ಮತ್ತೊಂದು ದೇಶಕ್ಕೆ ಆರ್ಥಿಕ ಸಹಾಯದ ನೆರವನ್ನು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಫಿಲಿಪೈನ್ಸ್ ದಕ್ಷಿಣದ ಮುಸ್ಲಿಂ ಬಾಹುಳ್ಯದ ಮಾರಾವಿ ನಗರದಲ್ಲಿ ಮಾನವರನ್ನು ಗುರಾಣಿಯಾಗಿರಿಸಿಕೊಂಡು ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕರು ಅಟ್ಟಹಾಸ ನಡೆಸುತ್ತಿದ್ದಾರೆ. ಇದರಿಂದಾಗಿ ದೇಶದ ಜನರಿಗೆ ಪರಿಹಾರ ಮತ್ತು ಪುನರ್ವಸತಿ ನೀಡಲು ಆರ್ಥಿಕ ನೆರವು ಬಳಸಿಕೊಳ್ಳುವಂತೆ ಭಾರತ ಫಿಲಿಪ್ಪೀನ್ಸ್ ಗೆ ತಿಳಿಸಿದೆ.
ಜುಲೈ 6ರಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಫಿಲಿಪ್ಪೀನ್ಸ್ ವಿದೇಶಾಂಗ ಕಾರ್ಯದರ್ಶಿ ಅಲಾನ್ ಪೀಟರ್ ಕೇಯಟಾನೋ ಅವರು ಆರ್ಥಿಕ ನೆರವಿನ ಕುರಿತು ಮಾತುಕತೆ ನಡೆಸಿದ್ದರು. ಐಸಿಸ್ ಬೆಂಬಲಿತ ಉಗ್ರರು ಮಾರಾವಿ ನಗರದಲ್ಲಿ ನಡೆಸಿರುವ ದಾಳಿಯಿಂದ ಸಂಭವಿಸಿದ ದುರಂತದ ಬಗ್ಗೆ ಸುಷ್ಮಾ ಸ್ವರಾಜ್ ಅವರು ಸಂತಾಪ ವ್ಯಕ್ತಪಡಿಸಿರುವುದಾಗಿ ಮನಿಲಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.