ಚಿಲಿ: ಮಾನವ ಈ ಭೂಮಿಯ ಮೇಲೆ ಎಷ್ಟೆಲ್ಲಾ ಸಂಶೋಧನೆಗಳನ್ನು ಮಾಡಿದರೂ, ಭೂಮಿ ತನ್ನದೇ ಆದ ರೀತಿಯಲ್ಲಿ ಮಾನವನಿಗೆ ಬೆರಗು ಮೂಡಿಸುತ್ತದೆ. ಇದೀಗ ಚಿಲಿ ದೇಶದಲ್ಲಿ ಕಂಡು ಬಂದ ಹೊಸ ನಿಗೂಢ ರಚನೆಯು ವಿಶ್ವಾದ್ಯಂತ ಭೂವಿಜ್ಞಾನಿಗಳ ಕುತೂಹಲವನ್ನು ಹೆಚ್ಚಿಸುತ್ತಿದೆ.
ಚಿಲಿಯ ಗಣಿಗಾರಿಕೆ ಪಟ್ಟಣವಾದ ಟಿಯೆರಾ ಅಮರಿಲ್ಲಾದಲ್ಲಿ ಸುಮಾರು 656 ಅಡಿ ಆಳದ ನಿಗೂಢ ಕಂದಕ (ಸಿಂಕ್ ಹೋಲ್) ಸೃಷ್ಟಿಯಾಗಿದೆ. ವಿಶೇಷವೆಂದರೆ ಈ ಸಿಂಕ್ ಹೋಲ್ ಮತ್ತಷ್ಟು ಬೆಳೆಯುತ್ತಿದೆ. ಇದರ ಬಗ್ಗೆ ಅಧ್ಯಯನ ನಡೆಸಲು ಚಿಲಿ ಸರ್ಕಾರವು ತಂಡ ರಚನೆ ಮಾಡಿದೆ.
656 ಅಡಿ ಆಳದ ಸಿಂಕ್ ಹೋಲ್ 98 ಅಡಿ ವ್ಯಾಸ ಹೊಂದಿದೆ ಎಂದು ರಾಷ್ಟ್ರೀಯ ಭೂವಿಜ್ಞಾನ ಮತ್ತು ಗಣಿ ಇಲಾಖೆ ಅಂದಾಜು ಮಾಡಿದೆ. ಟಿಯೆರಾ ಅಮರಿಲ್ಲಾ ನಗರಪಾಲಿಕೆಯ ಈ ಬೃಹತ್ ಕಂದಕದ ಸುತ್ತ ನೂರು ಮೀಟರ್ ರಕ್ಷಣಾ ಪರಿಧಿ ಹಾಕಿದೆ. ಕೆನಡಾದ ಲುಂಡಿನ್ ಮೈನಿಂಗ್ ಸಂಸ್ಥೆಯು ನಿರ್ವಹಿಸುತ್ತಿರುವ ಅಲ್ಕಾಪರ್ರೋಸಾ ಗಣಿ ಬಳಿ ಈ ಸಿಂಕ್ ಹೋಲ್ ಸೃಷ್ಟಿಯಾಗಿದ್ದು, ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ಆಸ್ತಿಹಾನಿಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಮಂಕಿಪಾಕ್ಸ್ ಪ್ರಕರಣ ಹೆಚ್ಚಳ: ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದ ಅಮೆರಿಕ
ಸ್ಯಾಂಟಿಯಾಗೊ ನಗರದಿಂದ ಸುಮಾರು 800 ಕಿ.ಮೀ ದೂರದಲ್ಲಿ ಈ ನಿಗೂಢ ಕಂದಕ ರಚನೆಯಾಗಿದೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಕಾಪರ್ರೋಸಾ ಗಣಿಯ ಕೆಲಸಗಳನ್ನು ನಿಲ್ಲಿಸಲಾಗಿದೆ. ಚಿಲಿ ದೇಶವು ವಿಶ್ವದ ಅತ್ಯಂತ ಹೆಚ್ಚಿನ ತಾಮ್ರ ಉತ್ಪಾದಕ ದೇಶವಾಗಿದೆ. ವಿಶ್ವದೆಲ್ಲೆಡೆ ಸರಬರಾಜಾಗುವ ತಾಮ್ರದಲ್ಲಿ ಕಾಲು ಭಾಗದಷ್ಟು ತಾಮ್ರ ಚಿಲಿಯಲ್ಲೇ ಗಣಿಗಾರಿಕೆ ಮಾಡಲಾಗುತ್ತದೆ.
“ಈ ಕಂದಕವು ಸಾಕಷ್ಟು ಆಳವಾಗಿದೆ. ಅಂದಾಜು 200 ಮೀಟರ್ ನಷ್ಟಿದೆ. ಇದುವರೆಗೆ ಅದರಡಿಯಲ್ಲಿ ಯಾವುದೇ ವಸ್ತುವನ್ನು ಪತ್ತೆ ಮಾಡಿಲ್ಲ. ಆದರೆ ಅಲ್ಲಿ ಸಾಕಷ್ಟು ನೀರು ಇರುವುದು ನಮಗೆ ಕಂಡು ಬಂದಿದೆ” ಎಂದು ರಾಷ್ಟ್ರೀಯ ಭೂ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡೇವಿಡ್ ಮಾಂಟೆನೆಗ್ರೊ ಹೇಳಿದ್ದಾರೆ.