ಅಹಮದಾಬಾದ್: ಗುಜರಾತ್‌ನ ಆನಂದ್ ಜಿಲ್ಲೆಯ ಮೂರು ಗ್ರಾಮಗಳ ಸ್ಥಳೀಯರು ಭೂಮಿ ಅಲುಗಾಡಿದಂತಾದ ಬಳಿಕ ದೊಡ್ಡ ಶಬ್ದವನ್ನು ಕೇಳಿ ತಮ್ಮ ಮನೆಗಳಿಂದ ಹೊರಗೆ ಧಾವಿಸಿದ್ದಾರೆ. ಈ ವೇಳೆ ದೊಡ್ಡ ಕಪ್ಪು ಲೋಹದ ಚೆಂಡಿನಂತಹ ವಸ್ತುಗಳು ಪತ್ತೆಯಾಗಿದ್ದು ಕೌತುಕಕ್ಕೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಬಾಹ್ಯಾಕಾಶದಿಂದ ನೆಲಕ್ಕೆ ಚೆಂಡಿನಂತಹ ವಸ್ತುಗಳು ಅಪ್ಪಳಿಸಿದ್ದು, ಗ್ರಾಮಸ್ಥರಿಗೆ ಭೂಕಂಪದ ಭೀತಿ ಆವರಿಸಿತ್ತು.
ಗುರುವಾರ ಸಂಜೆ 4.45 ರ ಸುಮಾರಿಗೆ, ಐದು ಕೆಜಿ ತೂಕದ ಮೊದಲ ದೊಡ್ಡ ಕಪ್ಪು ಲೋಹದ ಚೆಂಡು ಭಲೇಜ್‌ನಲ್ಲಿ ಬಿದ್ದಿತು ಮತ್ತು ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಬಿದ್ದಿತು. ಮೂರು ಸ್ಥಳಗಳು ಪರಸ್ಪರ 15 ಕಿಲೋಮೀಟರ್ ದೂರದಲ್ಲಿದೆ. ಲೋಹದ ಚೆಂಡುಗಳು ಉಪಗ್ರಹಗಳ ಅವಶೇಷಗಳೆಂದು ಶಂಕಿಸಲಾಗಿದೆ.
“ಮೊದಲ ಚೆಂಡು ಸಂಜೆ 4.45 ರ ಸುಮಾರಿಗೆ ಬಿದ್ದಿತು ಮತ್ತು ಸ್ವಲ್ಪ ಸಮಯದ ನಂತರ ಇತರ ಎರಡು ಸ್ಥಳಗಳಿಂದ ಇದೇ ರೀತಿಯ ವರದಿಗಳು ಬಂದವು. ಅದೃಷ್ಟವಶಾತ್ ಯಾವುದೇ ಗಾಯ ಅಥವಾ ಸಾವುನೋವು ಸಂಭವಿಸಿಲ್ಲ, ಅದೃಷ್ಟವಶಾತ್, ಅವಶೇಷಗಳು ಖಂಬೋಲಾಜ್‌ನಲ್ಲಿರುವ ಮನೆಯೊಂದರಿಂದ ದೂರ ಬಿದ್ದರೆ ಉಳಿದ ಎರಡರಲ್ಲಿ ತೆರೆದ ಪ್ರದೇಶದಲ್ಲಿ ಬಿದ್ದಿವೆ. ಇದು ಯಾವ ರೀತಿಯ ಬಾಹ್ಯಾಕಾಶ ಅವಶೇಷ ಎಂದು ನಮಗೆ ಖಚಿತವಾಗಿಲ್ಲ ಆದರೆ ಗ್ರಾಮಸ್ಥರ ಪ್ರಕಾರ ಆಕಾಶದಿಂದ ಬಿದ್ದಿವೆ” ಎಂದು ಆನಂದ್ ಜಿಲ್ಲಾ ಎಸ್ಪಿ, ಅಜಿತ್ ರಾಜಿಯನ್ ಅವರು ಹೇಳಿಕೆ ನೀಡಿದ್ದಾರೆ.