Advertisement

ಸಾಧನೆಯ ಸಂಭ್ರಮ: ಮೈಸೂರಿನ ಸ್ವಚ್ಛತೆಗೆ ಪಂಚತಾರಾ ಪಟ್ಟ

03:38 AM May 20, 2020 | Hari Prasad |

ಹೊಸದಿಲ್ಲಿ: ಕರ್ನಾಟಕದ ಮೈಸೂರು ಸಹಿತ ದೇಶದ ಆರು ನಗರಗಳು ಕಸ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿವೆ ಎಂದು ಕೇಂದ್ರ ಸರಕಾರ ಘೋಷಿಸಿದ್ದು, ಈ ಸಾಧನೆಗಾಗಿ ಪಂಚತಾರಾ ಮಾನ್ಯತೆಯನ್ನು (ಫೈವ್‌ ಸ್ಟಾರ್‌ ಗಾರ್ಬೇಜ್‌ ಫ್ರೀ ಸಿಟಿ) ನೀಡಿದೆ. ದಕ್ಷಿಣ ಭಾರತದಲ್ಲಿ ಮೈಸೂರಿಗೆ ಮಾತ್ರ ಈ ಪಟ್ಟ ಲಭಿಸಿದೆ.

Advertisement

ಸ್ವಚ್ಛ ಭಾರತ ಸರ್ವೇಕ್ಷಣ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 1,435 ನಗರಗಳು ಸ್ಪರ್ಧಿಸಿದ್ದವು.

ಒಟ್ಟು 1.9 ಕೋಟಿ ನಾಗರಿಕರಿಂದ ಪಡೆದ ಫೀಡ್‌ಬ್ಯಾಕ್‌ ಮತ್ತು 10 ಲಕ್ಷಕ್ಕೂ ಹೆಚ್ಚು ಜಿಯೋ – ಟ್ಯಾಗ್ಡ್ ಚಿತ್ರಗಳು ಹಾಗೂ ಒಟ್ಟು 5,175 ತ್ಯಾಜ್ಯ ವಿಲೇವಾರಿ ಘಟಕಗಳ ಕಾರ್ಯಕ್ಷಮತೆಯನ್ನು ಅವಲೋಕಿಸಿ ಈ ಪಟ್ಟಿ ತಯಾರಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಸ್ವಚ್ಛತಾ ನಿಯಮ ಆಧರಿಸಿ 141 ನಗರಗಳಿಗೆ ವಿವಿಧ ರೀತಿಯ ಸ್ಟಾರ್‌ ಪಟ್ಟ ನೀಡಲಾಗಿದೆ.

ಮಂಗಳೂರಿಗಿಲ್ಲ
ತ್ಯಾಜ್ಯಮುಕ್ತ ನಗರಗಳ ಪಟ್ಟಿಯಲ್ಲಿ ಮಂಗಳೂರು ಈ ಬಾರಿಯೂ ಅಗ್ರಸ್ಥಾನವನ್ನು ಕಳೆದುಕೊಂಡಿದೆ. 2018ರಲ್ಲಿ ಮಂಗಳೂರು ಘನತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಕಳೆದ ವರ್ಷದ ಪಚ್ಚನಾಡಿ ತ್ಯಾಜ್ಯರಾಶಿ ಕುಸಿದ ಘಟನೆ ಅಗ್ರಸ್ಥಾನ ಕೈತಪ್ಪಲು ಕಾರಣ ಎನ್ನಲಾಗಿದೆ.

ಯಾವ ನಗರಕ್ಕೆ ಯಾವ ಪಟ್ಟ?
ಮೈಸೂರಿನ ಜತೆಗೆ ಫೈವ್‌ ಸ್ಟಾರ್‌ ಪಟ್ಟ ಪಡೆದ ಇತರ ನಗರಗಳೆಂದರೆ ಛತ್ತೀಸ್‌ಗಢದ ಅಂಬಿಕಾಪುರ, ಮಧ್ಯಪ್ರದೇಶದ ಇಂದೋರ್‌, ಗುಜರಾತ್‌ನ ರಾಜ್‌ಕೋಟ್‌ ಮತ್ತು ಸೂರತ್‌, ಮಹಾರಾಷ್ಟ್ರದ ನವ ಮುಂಬಯಿ.

Advertisement

ತ್ರೀ ಸ್ಟಾರ್‌ ಪಟ್ಟ ಪಡೆದ ನಗರಗಳಲ್ಲಿ ಹೊಸದಿಲ್ಲಿ, ಹರಿಯಾಣದ ಕರ್ನಾಲ್‌, ಆಂಧ್ರಪ್ರದೇಶದ ತಿರುಪತಿ ಮತ್ತು ವಿಜಯವಾಡ, ಚಂಡೀಗಢ ನಗರ, ಛತ್ತೀಸ್‌ಗಢದ ಭಿಲಾಯ್‌ ನಗರ, ಗುಜರಾತ್‌ನ ಅಹ್ಮದಾಬಾದ್‌, ಮಧ್ಯಪ್ರದೇಶದ ಭೋಪಾಲ, ಝಾರ್ಖಂಡ್‌ನ‌ ಜಮ್ಶೆಡ್‌ಪುರ ಪ್ರಮುಖ.

ದಿಲ್ಲಿ ಕಂಟೋನ್ಮೆಂಟ್‌, ಹರಿಯಾಣದ ರೋಹ್ಟಕ್‌, ಮಧ್ಯಪ್ರದೇಶದ ಗ್ವಾಲಿಯರ್‌, ಮಹೇಶ್ವರ್‌, ಖಾಂದ್ವಾ, ಬದ್ನಾವರ್‌ ಮತ್ತು ಹಾತೋಡ್‌, ಗುಜರಾತ್‌ನ ಭಾವನಗರ್‌ ಮತ್ತು ವ್ಯಾರಾ ಸಿಂಗಲ್‌ ಸ್ಟಾರ್‌ ಪಡೆದ ನಗರಗಳಲ್ಲಿ ಪ್ರಮುಖವಾದವು.

Advertisement

Udayavani is now on Telegram. Click here to join our channel and stay updated with the latest news.

Next