Advertisement

ಮೈಸೂರು ವಿವಿಗೆ ಸ್ವಾಯತ್ತ ಸ್ಥಾನಮಾನದ ಗರಿ

12:42 PM Mar 22, 2018 | |

ಮೈಸೂರು: ಕಳೆದ ವರ್ಷವಷ್ಟೇ ವರ್ಷವಿಡೀ ಶತಮಾನೋತ್ಸವ ಸಂಭ್ರಮ ಆಚರಿಸಿಕೊಂಡ ಕರ್ನಾಟಕ ರಾಜ್ಯದ ಮೊದಲ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗ (ಯುಜಿಸಿ) ಸ್ವಾಯತ್ತ ಸ್ಥಾನಮಾನ ನೀಡಿರುವುದರಿಂದ ಹೊಸ ಕೋರ್ಸ್‌ಗಳ ಆರಂಭ, ಹೊಸ ಪಠ್ಯಕ್ರಮ ರೂಪಿಸಲು ಇನ್ನು ಯುಜಿಸಿ ಅಣತಿ ಕಾಯದೆ, ವಿವಿ ಸ್ವಂತ ನಿರ್ಧಾರ ಕೈಗೊಳ್ಳಬಹುದಾಗಿದೆ.

Advertisement

ಮೈಸೂರು ಅರಸರ ಪೈಕಿ ಅಭಿವೃದ್ಧಿಯ ಹರಿಕಾರ ಎನಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ದೂರದೃಷ್ಟಿ ಹಾಗೂ ಅಂದು ದಿವಾನರಾಗಿದ್ದ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಪ್ರಯತ್ನದಿಂದ 1916ರ ಜುಲೈ 27ರಂದು ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು, ಕುಕ್ಕರಹಳ್ಳಿ ಕೆರೆ ಪ್ರದೇಶ ಸೇರಿದಂತೆ 739 ಎಕರೆ ವಿಸ್ತೀರ್ಣದ ವಿಶ್ವವಿದ್ಯಾನಿಲಯದ ಆವರಣಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ,

ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ(ಕುವೆಂಪು) ಅವರು ಕುಲಪತಿಯಾಗಿದ್ದಾಗ ಮಾನಸಗಂಗೋತ್ರಿ ಎಂದು ನಾಮಕರಣ ಮಾಡಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯ ಜತೆಗೆ ಮಂಡ್ಯದ ತೂಬಿನಕೆರೆಯಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಹಾಸನದಲ್ಲಿ ಹೇಮ ಗಂಗೋತ್ರಿ, ಚಾಮರಾಜ ನಗರದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರವನ್ನು ಹೊಂದಿದೆ.

63 ಸ್ನಾತಕೋತ್ತರ ವಿಭಾಗಗಳು, 76 ಸ್ನಾತಕೋತ್ತರ ವಿಷಯಗಳನ್ನು ಒಳಗೊಂಡು 1.20ಲಕ್ಷಕ್ಕೂ ಹೆಚ್ಚು ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂ.ಫಿಲ್‌ ವಿದ್ಯಾರ್ಥಿಗಳು ಈ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 66 ಮಾನ್ಯತೆಯುಳ್ಳ ಸಂಶೋಧನಾ ಕೇಂದ್ರಗಳು, 157 ಸಂಶೋಧನಾ ಕೇಂದ್ರಗಳು, 8 ತರಬೇತಿ ಕೇಂದ್ರಗಳು, 14 ಅಧ್ಯಯನ ಪೀಠಗಳನ್ನು ವಿವಿ ಒಳಗೊಂಡಿದ್ದು, ವಿವಿಧ ದೇಶಗಳ ಸಾವಿರಾರು ವಿದೇಶಿ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ನ್ಯಾಕ್‌ ಐದು ಗ್ರೇಡ್‌ ಪಡೆದ ವಿವಿ: 2000ನೇ ಇಸವಿಯಲ್ಲಿ ನ್ಯಾಕ್‌ನಿಂದ ಐದು ನಕ್ಷತ್ರ ಮಾನ್ಯತೆ ಪಡೆದ ರಾಜ್ಯದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2006ರಲ್ಲಿ ನ್ಯಾಕ್‌ನಿಂದ ಎ-ಪ್ಲಸ್‌ ಶ್ರೇಣಿಪಡೆದಿದ್ದು, 2009ರಲ್ಲಿ ರಾಜ್ಯಸರ್ಕಾರ ಮೈಸೂರು ವಿವಿಯನ್ನು ಇನ್ನೋವೇಟಿವ್‌ ಯೂನಿವರ್ಸಿಟಿ ಎಂದು ಗುರುತಿಸಿದೆ. ಮೈಸೂರು ವಿಶ್ವವಿದ್ಯಾನಿಲಯವು ಸದ್ಯ ಪದವಿ, ಸ್ನಾತಕೋತ್ತರ ಪದವಿ, ಡಿಪೋ›ಸರ್ಟಿಫಿಕೇಟ್‌ ಕೋರ್ಸ್‌ಗಳು, ಪಿಎಚ್‌.ಡಿ ಪದವಿಗಳನ್ನು ನೀಡುತ್ತಿದೆ.

Advertisement

ಕಲಾ, ಮಾನವಿಕ ಮತ್ತು ಸಮಾಜವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ, ಶಿಕ್ಷಣ, ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಭೋದಿಸುತ್ತಿದ್ದು, ಮಹಾರಾಜ, ಯುವರಾಜ, ಲಲಿತ ಕಲೆಗಳ ಕಾಲೇಜು ಹಾಗೂ ವಿವಿ ಸಂಜೆ ಕಾಲೇಜು ವಿಶ್ವವಿದ್ಯಾನಿಲಯದ ಅಧೀನ ಕಾಲೇಜುಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಇದರ ಜತೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬಿ.ಎನ್‌.ಬಹದ್ದೂರ್‌ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸೈನ್ಸ್‌, ಬಾಬು ಜಗಜೀವನರಾಮ್‌ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ, ಮಹಿಳಾ ಅಧ್ಯಯನ ಕೇಂದ್ರ, ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ,

ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಪ್ರಾಚ್ಯವಿದ್ಯಾಸಂಸ್ಥೆ, ವಿದೇಶಿ ಭಾಷೆಗಳ ಶಾಲೆ, ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣಾ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಸ್ಕೂಲ್‌ ಆಫ್ ಪ್ಲಾನಿಂಗ್‌ ಅಂಡ್‌ ಆರ್ಕಿಟೆಕ್ಟರ್‌ ಹಾಗೂ ಮೂರನೇ ವಲಯ ಸಂಶೋಧನಾ ಕೇಂದ್ರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಯಾವ್ಯಾವ ಕೋರ್ಸ್‌ ಆರಂಭಿಸಬೇಕು. ಪಠ್ಯಕ್ರಮ ಹೇಗಿರಬೇಕು ಎಂಬುದನ್ನು ಇನ್ನು ವಿಶ್ವವಿದ್ಯಾನಿಲಯವೇ ನಿರ್ಧರಿಸಬಹುದು. ಯುಜಿಸಿಯಿಂದ ಹೆಚ್ಚಿನ ನಿರ್ಬಂಧ ಇರುವುದಿಲ್ಲ. ಆದರೆ, ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಮಾರ್ಗಸೂಚಿಯಂತೆ ಮುಂದುವರಿಯಬೇಕಾಗುತ್ತದೆ. ನಾವು ಫೆಡರಲ್‌ ಸ್ಟೇಟಸ್‌ ಕೇಳಿದ್ದೆವು. ಸ್ವಾಯತತ್ತೆ ನೀಡಿಕೆ ಈ ಸಂಬಂಧ ಯುಜಿಸಿಯಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
-ಪ್ರೊ.ಸಿ.ಬಸವರಾಜು, ಕುಲಪತಿ (ಪ್ರಭಾರ), ಮೈಸೂರು ವಿವಿ.

ಇತರೆ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಮೈಸೂರು ವಿವಿ ದಿ ಬೆಸ್ಟ್‌. ಯುಜಿಸಿ ಸ್ವಾಯತ್ತ ಸ್ಥಾನಮಾನ ಕೊಟ್ಟಿದೆ. ಆದರೆ, ಕೇಂದ್ರೀಯ ವಿವಿ ಸ್ಥಾನಮಾನ ತರಬೇಕು ಎಂಬುದು ನಮ್ಮ ಪ್ರಯತ್ನವಾಗಿತ್ತು.
-ಪ್ರೊ.ಕೆ.ಎಸ್‌.ರಂಗಪ್ಪ,ವಿಶ್ರಾಂತ ಕುಲಪತಿ, ಮೈಸೂರು ವಿವಿ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next