ಮೈಸೂರು: ಜಿಲ್ಲಾಧಿಕಾರಿಗಳಾದ ಅಭಿರಾಂ ಜಿ. ಶಂಕರ್ ಅವರು ತಾವು ಮಸ್ಸೂರಿಗೆ ತರಬೇತಿಗಾಗಿ 2 ವರ್ಷ ಹೋಗುವವರಿದ್ದು, ಇದಕ್ಕಾಗಿ ತಮಗೆ ಅಲ್ಲಿಗೆ ತೆರಳಲು ಅನುಮತಿ ನೀಡುವಂತೆ ಕೋರಿದ್ದರು. ಹೀಗಾಗಿ ಅವರಿಗೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಅವರನ್ನು ಸರ್ಕಾರ ವರ್ಗಾವಣೆ ಮಾಡಿಲ್ಲ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಅವರು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, 15 ದಿನಗಳ ಹಿಂದೆಯೇ ಮುಖ್ಯಮಂತ್ರಿಗಳ ಬಳಿ ಹೆಚ್ಚಿನ ತರಬೇತಿಗಾಗಿ ಮಸ್ಸೂರಿಗೆ ಹೋಗಬೇಕಾಗಿ ಕೋರಿಕೊಂಡಿದ್ದರು. ತಮಗೆ ತರಬೇತಿಯಿಂದ ವೃತ್ತಿಜೀವನದಲ್ಲಿ ಅನುಕೂಲವಾಗುತ್ತದೆ ಎಂದು ನನ್ನ ಬಳಿಯೂ ಕೇಳಿಕೊಂಡಿದ್ದರು. ಇಲ್ಲದಿದ್ದರೆ ಅವರನ್ನು ಡಿಸೆಂಬರ್ ವರೆಗೆ ಎಲ್ಲಿಯೂ ಹೋಗದಂತೆ ನಾನೇ ತಡೆಯುತ್ತಿದ್ದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಒಂದು ತಿಂಗಳು ಹಾಗೂ 2 ತಿಂಗಳು ರಜೆ ಸಿಗದೆ ಕೆಲಸ ನಿರ್ವಹಣೆ ಮಾಡುತ್ತಿರುವವರಿಗೆ ಮಧ್ಯೆ ಮಧ್ಯೆ ರಜೆ ನೀಡಲು ಸೂಚಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕೋಸ್ಕರ ನಾನು ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿಯನ್ನು ತಿಳಿಸುತ್ತೇನೆ ಎಂದು ಸಚಿವರು ಮಾಹಿತಿ ನೀಡಿದರು.
ಮೈಸೂರು ದಸರಾಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಟಿ. ರವಿ ಅವರ ಗಮನಕ್ಕೆ ತಂದಿದ್ದೇನೆ. ಇನ್ನು ಹೈಪವರ್ ಕಮಿಟಿಯನ್ನು ಮೈಸೂರಿನಲ್ಲಿಯೇ ರಚನೆ ಮಾಡಬೇಕೆಂಬ ನಿಟ್ಟಿನಲ್ಲಿ ಮಾತುಕತೆ ನಡೆದಿದೆ. ಈ ಬಾರಿ ಆನೆಗಳ ಸವಾರಿ ಸೇರದಂತೆ ಯಾವ ರೀತಿಯಾಗಿ ಆಚರಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಹೈಪವರ್ ಕಮಿಟಿಯಲ್ಲಿ ಚರ್ಚಿಸಿ ಇನ್ನು ವಾರದೊಳಗೆ ತೀರ್ಮಾನ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.