ಮೈಸೂರು: ಕಳೆದ ನಾಲ್ಕೈದು ದಿನಗಳ ಹಿಂದಿನಿಂದ ಕೊರೊನಾ ಭೀತಿಯಿಂದ ನಗರದಲ್ಲಿ ನಿರ್ಮಾಣವಾಗಿದ್ದ ಆತಂಕ ಕೊಂಚಮಟ್ಟಿಗೆ ಕಡಿಮೆಯಾಗಿದ್ದು, ನಗರದ ಕೆಲ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಈಗಾಗಲೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಶಾಪಿಂಗ್‌ಮಾಲ್, ಥಿಯೇಟರ್, ಕ್ಲಬ್, ಶಾಲಾ-ಕಾಲೇಜುಗಳ ಬಂದ್ ಮುಂದುವರಿದಿದೆ.
ಇದರ ನಡುವೆಯೂ ಸರ್ಕಾರಿ ಕಚೇರಿಗಳು, ಮಾರುಕಟ್ಟೆ ಇನ್ನಿತರ ಅಗತ್ಯ ವಸ್ತುಗಳ ಅಂಗಡಿಗಳು ಎಂದಿನಂತೆ ತೆರೆದಿರುವ ಕಾರಣ ನಗರದ ಹೃದಯಭಾಗಗಳಲ್ಲಿ ಜನಸಂಚಾರ ಹೆಚ್ಚಾಗಿದ್ದು, ಸಾರಿಗೆ ವಾಹನಗಳಲ್ಲೂ ಪ್ರಯಾಣಿಕರ ಸುಧಾರಿಸಿದೆ. ಶಾಲೆ, ಕಾಲೇಜು, ಖಾಸಗಿ ಕಚೇರಿಗಳಿಗೆ ರಜೆ ಇರುವ ಕಾರಣ ಜನರು ತಮ್ಮ ಆಧಾರ್ ಕಾರ್ಡ್‌ಗಳ ತಿದ್ದುಪಡಿಗೆ ಆಧಾರ್ ಕೇಂದ್ರಗಳತ್ತ ಮುಗಿಬಿದ್ದ ಪರಿಣಾಮ ಅಲ್ಲಿಯೂ ನೂರಾರು ಮಂದಿ ಜಮಾಯಿಸಿದ ಕಾರಣ,
ಮುಂಜಾಗ್ರತಾ ಕ್ರಮವಾಗಿ ಆಧಾರ್ ಸೇವಾ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಒಂದೇ ಯಂತ್ರದಲ್ಲಿ ಹಲವಾರು ಬೆರಳಚ್ಚು ನೀಡುವುದರಿಂದ ವೈರಸ್ ಹರಡುವ ಸಾಧ್ಯತೆ ಇರುವ ಕಾರಣ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಜೊತೆಗೆ ಈಗಾಗಲೇ ಎಲ್ಲಾ ಸರ್ಕಾರಿ ಕಚೇರಿ ಮತ್ತು ಖಾಸಗಿ ಕಂಪನಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ಆದೇಶಿಸಿದೆ.
ನ್ಯಾಯಾಲಯಕ್ಕೂ ತೊಡಕು: ಹೈಕೋರ್ಟ್ ನಿರ್ದೇಶನದಂತೆ ಬುಧವಾರ ಮೈಸೂರು ವಕೀಲರ ಸಂಘದ ಸಾಮಾನ್ಯ ಸಭೆ ನಡೆಸಿ ಮುಂದಿನ ಆದೇಶ ಬರುವವರೆಗೂ ಮಾ.21ವರೆಗೆ ನ್ಯಾಯಾಲಯಕ್ಕೆ ಹಾಜರಾಗದಂತೆ ವಕೀಲರು ನಿರ್ಧರಿಸಿದ್ದಾರೆ. ವಾರೆಂಟ್ ಅಡಿಯಲ್ಲಿ ಹಾಜರಾದ ಆರೋಪಿಗಳಿಗೆ ವಾತ್ರ ವಿನಾಯಿತಿ ನೀಡಲಾಗುತ್ತದೆ. ಇದೇ ನಿಯಮ ಎಸಿ ಮತ್ತು ಡಿಸಿ ನ್ಯಾಯಾಲಯಗಳಿಗೂ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.
ಪ್ರಸಾದ ಬದಲು ಮಾಸ್ಕ್ ವಿತರಣೆ: ಕೊರೊನಾ ವೈರಸ್ ಹಾಗೂ ಹಕ್ಕಿಜ್ವರದ ಹಿನ್ನೆಲೆ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪ್ರಸಾದದ ಬದಲು ಮಾಸ್ಕ್ಗಳನ್ನು ವಿತರಣೆ ವಾಡಲಾಯಿತು.
ಪಿ.ಜಿ., ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ: ಬೇರೆ ಬೇರೆ ಊರುಗಳಿಂದ ಬಂದು ಮೈಸೂರಿನ ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ ಉಳಿದುಕೊಂಡಿದ್ದು, ಕೊರೊನಾ ಸಂಬಂಧ ಮುಂಜಾಗ್ರತೆ ವಹಿಸಿರುವ ಜಿಲ್ಲಾಧಿಕಾರಿಗಳು ಪಿಜಿಯಲ್ಲಿರುವವರು ಮನೆಗೆ ಮರಳುವುದು ಸೂಕ್ತ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಮನೆಗೆ ಮರಳದಿದ್ದರೆ ಇರುವ ಜಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆ ಅವರ ಕರ್ತವ್ಯ, ಮಿಕ್ಕ ಸ್ವಚ್ಛತೆ ಮಾಲಿಕರ ಕರ್ತವ್ಯ. ಒಂದೇ ಕೋಣೆಯಲ್ಲಿ ಹೆಚ್ಚು ಜನರಿರಬಾರದು. ನೈರ್ಮಲ್ಯದ ಆದೇಶಗಳನ್ನು ಪಾಲಿಸದಿದ್ದರೆ ಆ ಹಾಸ್ಟೆಲ್ ಅಥವಾ ಪಿಜಿ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.