ಮೈಸೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಸೋಮವಾರ ಒಂದೇ ದಿನ ಮೂವರು ಮೃತಪಟ್ಟಿದ್ದು, 45 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿಗೆ ಬಲಿಯಾದವರ ಸಂಖ್ಯೆ 8ಕ್ಕೇರಿದೆ. ಮೈಸೂರಿನ ಹುಲ್ಲಿನ ಬೀದಿ, ಲಷ್ಕರ್ ಮೊಹಲ್ಲಾ ಹಾಗೂ ಚಾಮರಾಜನಗರದ ವ್ಯಕ್ತಿಯೂ ಸೇರಿದಂತೆ ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂವರು ಭಾನುವಾರ ತೀವ್ರ ಉಸಿರಾಟ, ಕಫ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇಬ್ಬರು ಕೆ.ಆರ್.ಆಸ್ಪತ್ರೆಗೆ ಹಾಗೂ ಒಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಮೂವರ ಗಂಟಲು ದ್ರವ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಮೂವರಿಗೂ ಸೋಂಕು ದೃಢಪಟ್ಟಿತ್ತು. ಮೂವರೂ ಸೋಂಕು ದೃಢವಾದ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತವೇ ಮೂವರ ಅಂತ್ಯ ಸಂಸ್ಕಾರ ನೆರವೇರಿಸಿದೆ.
45 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಸೋಮವಾರ 45 ಮಂದಿಗೆ ಸೋಂಕು ಹರಡಿದ್ದು, ಸೋಂಕಿತರ ಸಂಖ್ಯೆ 500ರ ಗಡಿ ತಲುಪಿದೆ. ಜಿಲ್ಲೆ ಮತ್ತೆ ಕೋವಿಡ್ ಹಾಟ್‌ಸ್ಟಾಟ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಸೋಮವಾರ ಕೆ.ಆರ್.ನಗರ ತಹಶೀಲ್ದಾರ್, ಒಂದು ತಿಂಗಳ ಮಗು ಸೇರಿದಂತೆ 45 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 481ಕ್ಕೇರಿದೆ.
16 ಮಂದಿ ಗುಣಮುಖ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಸೋಮವಾರ 16 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 268 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದಾರೆ. ಈ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ 198ಕ್ಕೇರಿದ್ದು, 8 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ತಹಶೀಲ್ದಾರ್‌ಗೂ ಪಾಸಿಟಿವ್: ಕೋವಿಡ್ 19 ಸೋಂಕು ಹರಡುವಿಕೆ ತಡೆಗಟ್ಟಲು ಮತ್ತು ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದ ಕೆ.ಆರ್.ನಗರ ತಹಶೀಲ್ದಾರ್‌ಗೆ ಸೋಂಕು ತಗುಲಿದೆ. ಅವರಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಅವರ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ಕೆ.ಆರ್.ಮಹೇಂದ್ರಪ್ಪ ಮಾಹಿತಿ ನೀಡಿದ್ದಾರೆ.
ಇಎಸ್‌ಐ ಆಸ್ಪತ್ರೆ ಬಳಕೆ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲಾ ಬೆಡ್‌ಗಳು ಭರ್ತಿಯಾದ ಕಾರಣ ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ದಾಖಲು ಮಾಡಲಾಗಿದೆ. 250 ಹಾಸಿಗೆ ಸಾಮರ್ಥ್ಯ ಇದ್ದ ಜಿಲ್ಲಾಸ್ಪತ್ರೆ ಇದೀಗ ಭರ್ತಿಯಾಗಿದೆ. ಆದ ಕಾರಣ ಇದೀಗ 100 ಹಾಸಿಗೆ ಸೌಲಭ್ಯ ಇರುವ ಇಎಸ್‌ಐ ಆಸ್ಪತ್ರೆಗೆ ಕೋವಿಡ್ 19 ಸೋಂಕಿತರನ್ನು ದಾಖಲಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಅಲ್ಲದೆ, ವಿಕ್ರಮ್ ಆಸ್ಪತ್ರೆ ಹಾಗೂ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಇರುವ ಕೆಎಸ್‌ಒಯು ಜಾಗದಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸಿದ್ಧ ಮಾಡಲಾಗಿದೆ. ನಾರಾಯಣ ಹೃದಯಾಲಯ, ಅಪೋಲೊ ಹಾಗೂ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ತಲಾ 30 ಬೆಡ್ ಅನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ.