Advertisement

ಸನಾತನ ಧರ್ಮ ರಕ್ಷಣೆಗೆ ಮೈಸೂರು ಸಂಸ್ಥಾನ ಬದ್ಧ

11:10 AM Feb 04, 2019 | |

ಶಿವಮೊಗ್ಗ: ರಾಜ್ಯದ ಇತಿಹಾಸದಲ್ಲಿ ಬ್ರಾಹ್ಮಣ ಸಮಾಜ ಎಲ್ಲಾ ಸಮುದಾಯಗಳೊಂದಿಗೆ ಸಂಬಂಧ ಕಾಪಾಡಿಕೊಂಡು ಬರುತ್ತಿದೆ. ಅಲ್ಲದೆ ಸನಾತನ ಧರ್ಮವನ್ನು ಅನುಸರಿಸಿಕೊಂಡು ಬರುತ್ತಿವೆ. ಸಮುದಾಯದ ಬಾಂಧವ್ಯವನ್ನು ಮೈಸೂರು ಸಂಸ್ಥಾನ ಹೀಗೆ ಮುಂದುವರಿಸಿಕೊಂಡು ಹೋಗುತ್ತದೆ ಎಂದು ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

Advertisement

ನಗರದ ಗಾಯತ್ರಿ ಮಾಂಗಲ್ಯ ಮಂದಿರಲ್ಲಿ ಭಾನುವಾರ ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟ, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದಿಂದ ಆಯೋಜಿಸಿದ್ದ ಹೊಯ್ಸಳ ಕರ್ನಾಟಕ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಜರು ಮಾಡಿರುವ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಧಾರ್ಮಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬ್ರಾಹ್ಮಣ ಸಮುದಾಯದ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಮೈಸೂರು ಸಂಸ್ಥಾನ ಪರ್ಕಳ ಪೀಠ ಹಾಗೂ ಶೃಂಗೇರಿ ಪೀಠದಲ್ಲಿನ ರಾಜಗುರುಗಳ ಮಾರ್ಗದರ್ಶನದಿಂದ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮುಂದೆಯೂ ಸಹ ಮೈಸೂರು ಸಂಸ್ಥಾನ ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್‌ ಮಾತನಾಡಿ, ಬ್ರಾಹ್ಮಣ ಸಮುದಾಯ ಪ್ರಕೃತಿ ಆರಾಧನೆ ಹಾಗೂ ಸಂಸ್ಕೃತಿ ಪುರಸ್ಕಾರ ಮಾಡುತ್ತಾ ವಿಕೃತಿಯನ್ನು ತಿರಸ್ಕರಿಸಿದೆ. ಬ್ರಾಹ್ಮಣ ಸಮುದಾಯ ತನ್ನ ಮೇಲೆ ಎಷ್ಟೇ ಶೋಷಣೆಯಾದರೂ ಸಹ ಶಕ್ತಿಯಾಗಿ ಸಂಘಟಿಸಿಕೊಂಡು ಮೇಲೇರುವ ಪ್ರಯತ್ನ ಮಾಡುತ್ತಿದೆ ಎಂದ ಅವರು, ಭಾರತದಲ್ಲಿ ಕೃಷಿ ಹಾಗೂ ಋಷಿ ಎರಡು ಮುಖ್ಯವಾಗಿದ್ದು. ಋಷಿ ಸಂಸ್ಕೃತಿ ಸಿದ್ಧಾಂತಗಳ ಮೂಲಕ ಜ್ಞಾನ ತುಂಬುವ ಕೆಲಸ ಮಾಡುತ್ತಿದೆ. ಕೃಷಿಗೆ ಪ್ರಕೃತಿ ಶೋಷಣೆೆ ಮಾಡದೆ ಬದುಕುವ ವಿದ್ಯೆಯನ್ನು ಕಲಿಸಿಕೊಡುತ್ತದೆ ಎಂದರು.

ಸಮಾವೇಶದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸುವ ಹೊಣೆ ಯುವಜನತೆಯ ಮೇಲಿರುವುದರಿಂದ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಅವರ ಮನಸ್ಥಿತಿಯನ್ನು ಉತ್ತಮ ಪಡಿಸಬೇಕಿದೆ ಎಂದರು.

Advertisement

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ಮಾತನಾಡಿ, ಬ್ರಾಹ್ಮಣ ಸಮಾಜವು ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬ್ರಾಹ್ಮಣ ಸಮಾಜ ತಮ್ಮದೇ ಕೊಡುಗೆ ನೀಡಿದೆ ಎಂದರು.

ಬ್ರಾಹ್ಮಣ ಸಮುದಾಯದಲ್ಲಿ ಇನ್ನೂ ಸಹ ಅನೇಕ ಜನರು ಆರ್ಥಿಕವಾಗಿ ಸಬಲರಾಗಿಲ್ಲ. ಹಾಗಾಗಿ ಅವರನ್ನು ಸಹ ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಬ್ರಾಹ್ಮಣ ಸಮುದಾಯ ಮುಂದಾಗುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಅಡ್ವೋಕೇಟ್ ಜನರಲ್‌ ಅಶೋಕ್‌ ಹಾರನಹಳ್ಳಿ ಮಾತನಾಡಿ, ಇಂದು ಸಮಾಜದ ಪ್ರಮುಖ ಅಂಗಗಳಲ್ಲಿ ಸಾಮಾಜಿಕ ಬದ್ಧತೆ, ನೈತಿಕತೆ ಕುಸಿದಿದೆ. ಹಣದ ವ್ಯಾಮೋಹ ಹೆಚ್ಚಾಗಿ ಸಂಬಂಧಗಳು ಸಡಿಲಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಪ್ರತಿಯೊಬ್ಬರು ತಮ್ಮಲ್ಲಿ ಸದಾಚಾರವನ್ನು ಅಳವಡಿಸಿಕೊಂಡಾಗ ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರದ ಹಿತಕ್ಕಾಗಿ ಸಂಕಲ್ಪ ಮಾಡಿಕೊಂಡು ಸದಾಚಾರವನ್ನು ನಮ್ಮ ದೇಹದ ಅಂಗಾಂಗಳಾಗಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ 50 ಮಂದಿ ನಿವೃತ್ತ ಯೋಧರನ್ನು ಗೌರವಿಸಲಾಯಿತು. ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್‌. ವೆಂಕಟನಾರಾಯಣ, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಎಂ. ವೇಣುಗೋಪಾಲ್‌, ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಎನ್‌. ವೆಂಕಟೇಶಮೂರ್ತಿ ಮತ್ತಿತರರು ಇದ್ದರು.

ನನ್ನ ಯಶಸ್ಸಿಗೆ ಗುರು ಪುಟ್ಟಣ್ಣ ಕಾರಣ: ಶ್ರೀನಾಥ್‌
ದುಡಿಯುವ ಶಕ್ತಿ, ಪ್ರೀತಿಸುವ ಜನರು ಇದ್ದಾಗ ಯಾವ ಕ್ಷೇತ್ರದಲ್ಲಾದರೂ ಯಶಸ್ಸು ಗಳಿಸಬಹುದು ಎಂದು ಚಲನಚಿತ್ರ ನಟ ಶ್ರೀನಾಥ್‌ ಅಭಿಪ್ರಾಯಪಟ್ಟರು. ಜೀವನದ ಅನೇಕ ಸರಿ, ತಪ್ಪುಗಳ ಮಧ್ಯೆಯೂ ಸಿನಿಮಾರಂಗದಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ನಾನು ಈ ಹಂತಕ್ಕೆ ಬರಲು ನನ್ನ ಗುರು ಪುಟ್ಟಣ್ಣ ಕಣಗಾಲ್‌ ಕಾರಣ. ಅವರು ನನ್ನ ಚಿತ್ರ ನಿರ್ದೇಶಿಸಿರುವ ಜತೆಗೆ ನನ್ನ ಬದುಕನ್ನೂ ನಿರ್ದೇಶಿಸಿದ್ದಾರೆ. ಏನು ಮಾಡಬೇಕು, ಮಾಡಬಾರದು ಎಂದು ಕಲಿಸಿದ್ದಾರೆ. ಅವರ ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ, ಪಯಣಿಗ ನಾನಮ್ಮ ಎನ್ನುವ ಹಾಡು ನನ್ನ ಜೀವನದ ಹಾಡಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next