Advertisement
ಮೈಸೂರಿನ ಅರುಣ್ ಯೋಗಿ ರಾಜ್ ಕೆತ್ತಿದ ಬಾಲರಾಮನ ವಿಗ್ರಹವೇ ಆಯ್ಕೆಯಾದರೆ ಅವರು ಕೆತ್ತಿದ 3ನೇ ಅದ್ಭುತ ಶಿಲ್ಪ ದೊಡ್ಡ ಪ್ರಮಾಣದಲ್ಲಿ ಸ್ವೀಕೃತಗೊಂಡು ಸ್ಥಾಪನೆಗೊಂಡಂತಾಗುತ್ತದೆ.ಇದಕ್ಕಿಂತ ಮೊದಲು ಹೊಸದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಮತ್ತು ಕೇದಾರನಾಥದಲ್ಲಿ ಇರುವ ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿದ ಹೆಗ್ಗಳಿಕೆಯೂ ಅವರದ್ದಾಗಿದೆ. ರಾಮಲಲ್ಲಾನ ಮೂರ್ತಿಯನ್ನು ಕೆತ್ತಲು ಯೋಗಿ ಅರುಣ್ ರಾಜ್ ಅವರು ಬಳಕೆ ಮಾಡಿದ ಕಲ್ಲು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನದ್ದು ಎನ್ನಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಕಾರ್ಯ ದರ್ಶಿ ಚಂಪತ್ ರಾಯ್ ಬಾಲ ರಾಮನ ವಿಗ್ರಹದ ವರ್ಣನೆ ಮಾಡಿದ್ದಾರೆ. ರಾಮ ಲಲ್ಲಾನ ಕಣ್ಣುಗಳು ಕಮಲದ ಹೂವಿನ ಎಸಳುಗಳಂತೆ, ಮುಖ ಚಂದ್ರನಂತೆ ಹೊಳೆಯುತ್ತಿದೆ ಎಂದು ವಿವರಿಸಿದ್ದಾರೆ. ತುಟಿಗಳ ಮೇಲೆ ಶಾಂತ ನಸುನಗು ಇದೆ. ಬಾಲ ರಾಮನ ವಿಗ್ರಹ ದೀರ್ಘ ಬಾಹುಗಳು ಗಮನ ಸೆಳೆಯುತ್ತವೆ ಎಂದು ಹೇಳಿದ್ದಾರೆ. ಟ್ರಸ್ಟ್ ಹೇಳುವುದೇನು?
ಯಾವ ವಿಗ್ರಹ ಎಂಬ ಅಂತಿಮ ತೀರ್ಮಾನವನ್ನು ಈ ವಾರದಲ್ಲೇ ಕೈಗೊಳ್ಳಲಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ.
Related Articles
ಹೊನ್ನಾವರದ ಗಣೇಶ್ ಭಟ್, ರಾಜಸ್ಥಾನದ ನಾರಾಯಣ ಪಾಂಡೆ ಕೂಡ ಬಾಲರಾಮನ ವಿಗ್ರಹ ಕೆತ್ತಿದ್ದಾರೆ. ಗಣೇಶ್ ಭಟ್ ಅವರು ಕಾರ್ಕಳದ ತೆಗೆದುಕೊಂಡು ಹೋಗಲಾಗಿದ್ದ ಕಲ್ಲಿನಲ್ಲಿ ವಿಗ್ರಹ ಕೆತ್ತನೆ ಮಾಡಿದ್ದಾರೆ. ನಾರಾಯಣ ಪಾಂಡೆ ಅವರು ಶ್ವೇತ ವರ್ಣದ ಚಂದ್ರಕಾಂತ ಶಿಲೆಯಲ್ಲಿ ರಾಮ ಲಲ್ಲಾನನ್ನು ರೂಪಿಸಿದ್ದಾರೆ. ಅರುಣ್ ಅವರ ವಿಗ್ರಹವೇ ಆಯ್ಕೆಯಾದರೆ ಉಳಿದ ಇಬ್ಬರು ಶಿಲ್ಪಿಗಳು ಕೆತ್ತಿದ ವಿಗ್ರಹಗಳನ್ನು ದೇಗುಲದ ಇತರ ಭಾಗಗಳಲ್ಲಿ ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
Advertisement
ಬಾಲ ರಾಮನ ವಿಗ್ರಹ ಹೇಗೆ ಇದೆ?
1. ಕಣ್ಣುಗಳು ಕಮಲದ ಹೂವಿನ ಎಸಳುಗಳಂತೆ
2. ಚಂದ್ರನಂತೆ ಹೊಳೆ ಯುವ ಮುಖ
3. ತುಟಿಯಲ್ಲಿ ಶಾಂತ ಸ್ನಿಗ್ಧ ಮುಗುಳ್ನಗು
4. ದೀರ್ಘವಾಗಿರುವ ಆಕರ್ಷಕ ಬಾಹುಗಳು ಅಧಿಕೃತಗೊಳ್ಳುವ
ಮೊದಲೇ ಸಂಭ್ರಮ
ಬೆಂಗಳೂರು: ರಾಮಲಲ್ಲಾನ ಮೂರ್ತಿ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ಆಗುವ ಮೊದಲೇ ರಾಜ್ಯ ಬಿಜೆಪಿ ನಾಯಕರು ಸಂಭ್ರಮಿಸತೊಡಗಿದ್ದಾರೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆಯೇ ಆಯ್ಕೆಯಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ಪಿ.ಸಿ. ಮೋಹನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸಹಿತ ಅನೇಕ ಬಿಜೆಪಿ ನಾಯಕರು ನಾ ಮುಂದು ತಾ ಮುಂದು ಎಂದು ಅಭಿನಂದನೆ ತಿಳಿಸಿದ್ದಾರೆ. ಎಲ್ಲ ನಾಯಕರೂ ಸರಣಿ ಟ್ವೀಟ್‌ಗಳನ್ನು ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.