ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿರುವ ಪ್ರತಿಯೊಂದು ರಸ್ತೆಗಳೂ ಗುಂಡಿಮಯವಾಗಿವೆ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಪ್ರತಿಭಟನೆ ನಡೆಸಿದರು.
ಗುರುವಾರ ಮುಂಜಾನೆ ನಗರದ ತುಳಸಿದಾಸ್ ಮೋಹನ್ ದಾಸ್ ತಾಯಿ ಮಗುವಿನ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಮೂಲಕ ಶಾಸಕ ರಾಮದಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುಂಡಿಗಳಿಗೆ ಜೆಲ್ಲಿ ಮಣ್ಣು ಸುರಿಯುವ ಮೂಲಕ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಹಲವಾರು ವಯೋವೃದ್ಧರು, ಮಹಿಳೆ ಯರು, ವಿದ್ಯಾರ್ಥಿಗಳು ಗುಂಡಿ ತಪ್ಪಿಸಲು ಹೋಗಿ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಈಗಾಗಲೇ ಹಲವಾರು ಬಾರಿ ರಸ್ತೆ ತಡೆದು ಪ್ರತಿಭಟಿಸಿ ಪಾಲಿಕೆಯ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ದಸರಾ ವಿಶೇಷ ಅನುದಾನದಲ್ಲೂ ರಸ್ತೆಗಳು ದುರಸ್ತಿ ಆಗದಿರುವುದು ವಿಪರ್ಯಾಸ ಎಂದು ಕಿಡಿಕಾರಿದರು.
ನಾಗರಿಕರನ್ನು ಕೊಲ್ಲುತ್ತಿರುವ ಬಿಜೆಪಿ: ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನೀಡಿದ ಕೊಡುಗೆಗಳನ್ನು ಜನರು ಇಂದಿಗೂ ನೆನೆಯುತ್ತಿದ್ದಾರೆ. ಆದರೆ, ಇಂದಿನ ಬಿಜೆಪಿ ಸರ್ಕಾರ ಅಭಿವೃದ್ಧಿಯನ್ನು ಬಿಟ್ಟು ಬೇರೆ ವಿಚಾರಗಳಿಗೆ ನಾಗರಿಕರನ್ನು ಕೊಲ್ಲುತ್ತಿರುವುದು ದುರಾದೃಷ್ಟ ಎಂದರು.
ಪ್ರಚಾರಕ್ಕೆ ಮಾತ್ರ ಸೀಮಿತ: ಚುನಾವಣೆಯ ಸಂದರ್ಭದಲ್ಲಿ ಮತ ಬ್ಯಾಂಕ್‌ಗಾಗಿ ಕೋಮು ದ್ವೇಷ, ಧರ್ಮದ ರಾಜಕಾರಣ ಮಾಡಿಕೊಂಡು ದೇಶ, ರಾಜ್ಯವನ್ನು ಅಭಿವೃದ್ಧಿಯಿಂದ ವಂಚಿಸುತ್ತಿದ್ದೆ. ಅದಕ್ಕೆ ಪೂರಕವಾಗುವಂತೆ ರಾಜ್ಯದಲ್ಲಿ ಸುದ್ಧಿಯಾಗಿರುವ ಶೇ.40 ಕಮಿಷನ್ ತಾಜಾ ಉದಾಹರಣೆ. ಇಡೀ ದೇಶದಲ್ಲಿ ರಸ್ತೆ ಗುಂಡಿಗಳಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರೆ ಆಡಳಿತ ಎಷ್ಟರ ಮಟ್ಟಿಗೆ ಇದೆ ಎಂಬುದು ಅರ್ಥವಾಗುತ್ತದೆ. 224 ಕ್ಷೇತ್ರದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಮಾದರಿ ಎಂಬ ಹೇಳಿಕೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.
ಬರೀ ಗುಂಡಿಗಳದ್ದೇ ಕಾರುಬಾರು: ಕೆ.ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ ಬರೀ ಗುಂಡಿಗಳದ್ದೇ ಕಾರುಬಾರಾಗಿದೆ. ಎಲ್ಲಾ ಬಡಾವಣೆಗಳಲ್ಲೂ ರಸ್ತೆಗಳು ಹಾಳಾಗಿದೆ. ಎಷ್ಟು ಪ್ರತಿಭಟಿಸಿದರೂ ಬಿಜೆಪಿ ಸರ್ಕಾರ ಕಿವಿ ಇಲ್ಲದ ಆಡಳಿತ ನೆಡೆಸುತ್ತಿದೆ. ಬೆಂಗಳೂರಿನಲ್ಲಿ 21 ಜನ, ಮಂಡ್ಯದಲ್ಲಿ ಒಬ್ಬ ಯೋಧ ರಸ್ತೆ ಗುಂಡಿಯಿಂದಾಗಿ ಮೃತಪಟ್ಟರೆ ಮೈಸೂರಿನಲ್ಲಿ ಹಲವಾರು ಜನ ನಾಗರೀಕರು ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ, ಶೀಘ್ರವಾಗಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಿ ಇಲ್ಲವಾದಲ್ಲಿ ಗುಂಡಿಗೆ ಬಿದ್ದು ಅನಾಹುತವಾದರೇ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.