ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತಾದ ಅಂಬಾವಿಲಾಸ ಅರಮನೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪಾಲಿನ ಪ್ರಮುಖ ಆಕರ್ಷಣೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.
ಗೂಗಲ್ ಮ್ಯಾಪ್‌ನಲ್ಲಿ ಅತಿ ಹೆಚ್ಚು ಪರಾಮರ್ಶಿತವಾದ ಅಗ್ರ 20 (ಮೋಸ್ಟ್ ರಿವ್ಯೂವ್ಡ್ ) ತಾಣಗಳ ಪಟ್ಟಿಯಲ್ಲಿ ಮೈಸೂರು ಅರಮನೆ, ಆಗ್ರಾದ ತಾಜ್‌ಮಹಲ್ ಅನ್ನು ಹಿಂದಿಕ್ಕಿ 17ನೇ ಸ್ಥಾನ ಪಡೆದಿದ್ದರೆ, ಪ್ರೇಮಸೌಧವು 19ನೇ ಸ್ಥಾನ ಪಡೆದಿದೆ. ಅರಮನೆಗೆ 1.92 ಲಕ್ಷ ಹಾಗೂ ಪ್ರೇಮಸೌಧ ತಾಜ್ ಮಹಲ್‌ಗೆ 1.88 ಲಕ್ಷ ಪರಾಮರ್ಶೆ ದೊರಕಿದೆ.
ಜಾಗತಿಕವಾಗಿ ಗೂಗಲ್ ಮ್ಯಾಪ್‌ನಲ್ಲಿ ಹೆಚ್ಚು ವಿಮರ್ಶಿಸಲಾದ 500 ಸ್ಥಳಗಳ ಪಟ್ಟಿ ಸಿದ್ಧಪಡಿಸಲಾಗಿದೆ. ವಾರಕ್ಕೆ ಒಮ್ಮೆ ಈ ಪಟ್ಟಿಯನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.
ಮೆಕ್ಕಾದ ಮಸೀದ್ ಅಲ್ ಹರಮ್ ಮೊದಲ ಸ್ಥಾನ ಪಡೆದಿದ್ದು, 3.31 ಲಕ್ಷ ಪರಾಮರ್ಶೆ ಪಡೆದಿದೆ. ಮುಂಬೈನ ಗೇಟ್‌ವೇ ಆಫ್ ಇಂಡಿಯಾ (2.60 ಲಕ್ಷ ಪರಾಮರ್ಶೆ) 5ನೇ ಸ್ಥಾನ ಹಾಗೂ ನವದೆಹಲಿಯ ಇಂಡಿಯಾ ಗೇಟ್ (2.01 ಲಕ್ಷ ಪರಾಮರ್ಶೆ) 15ನೇ ಸ್ಥಾನ ಗಳಿಸಿದೆ.
ಇದನ್ನೂ ಓದಿ : ಕಾರುಗಳ ನಡುವೆ ಭೀಕರ ಅಪಘಾತ : ಓರ್ವ ಸಾವು, ಇಬ್ಬರು ಗಂಭೀರ
1897ರಲ್ಲಿ ಕಟ್ಟಲಾರಂಭಿಸಿ 1912ರಲ್ಲಿ ಮುಕ್ತಾಯಗೊಳಿಸಿದ ಈ ಅರಮನೆಯು ಗುಮ್ಮಟಗಳು, ಕಮಾನುಗಳು, ಗೋಪುರಗಳಿಂದ ಕೂಡಿದ್ದು ಇಂಡೋ ಸಾರ್ಸೆನಿಕ್ ಶೈಲಿಯಲ್ಲಿದೆ. ಅರಮನೆಯ ಹೊರಭಿತ್ತಿಗಳಲ್ಲಿ ಹಕ್ಕಿಗಳು, ಪ್ರಾಣಿಗಳು ಹಾಗೂ ಇತರ ಕೆತ್ತನೆ ಇದೆ. ಒಳಭಾಗದ ಮುಚ್ಚಿಗೆಯಲ್ಲಿ ಕೆತ್ತನೆ ಇದೆ. ಇಲ್ಲಿ 19 ಮತ್ತು 20ನೇ ಶತಮಾನದ ಪಾರಂಪರಿಕ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಪೂರ್ವವಾದ ಕೆತ್ತನೆಯಿರುವ ಕಂಬಗಳಿಂದ ಕೂಡಿದ ವಿಶಾಲವಾದ ಹಾಲ್‌ಗಳು, ದರ್ಬಾರ್‌ಹಾಲ್, ಕಲ್ಯಾಣ ಮಂಟಪಗಳು, ಆಯುಧಗಾರಗಳಿವೆ. ಇದೆಲ್ಲ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.