ಬೆಂಗಳೂರು: “ಮೈಸೂರು ಪಾಕ್‌ಗೆ ತಮಿಳುನಾಡಿನ ಸಿಹಿ ಖಾದ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೌಗೋಳಿಕೆ ಮಾನ್ಯತೆ ನೀಡಿದ್ದಾರೆ’ ಎಂದು ಆನಂದ್ ರಂಗನಾಥನ್ ಎನ್ನುವವರು ಮಾಡಿದ ಟ್ವೀಟ್ ಸಾಕಷ್ಟು ಗೊಂದಲ ಸೃಷ್ಟಿಸಿದೆ. ತಕ್ಷಣ ಎಚ್ಚೆತ್ತುಕೊಂಡಿರುವ ತಮಿಳುನಾಡಿನ ಆನಂದ ರಂಗನಾಥನ್, ಅದನ್ನು ತಾವು ತಮಾಷೆಯಾಗಿ ಹಾಕಿರುವುದಾಗಿ ಹೇಳಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಈ ಗೊಂದಲದ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸ್ಪಷ್ಟೀಕರಣ ನೀಡಿದ್ದು, ಆನಂದ್ ರಂಗನಾಥನ್ ಅವರಿಗೆ ಮೈಸೂರು ಪಾಕ್ ಸ್ವೀಟ್ ಬಾಕ್ಸ್ ನೀಡಿರುವುದನ್ನು ತಮಾಷೆಯಾಗಿ ಹೇಳಿಕೊಂಡಿರುವುದು ತಪ್ಪಾಗಿ ಅರ್ಥೈಸಲಾಗಿದೆ. ಆ ರೀತಿಯ ಮಾನ್ಯತೆ ನೀಡಲು ಯಾವುದೇ ಸಮಿತಿ ಇಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.
ಆನಂದ್ ರಂಗನಾಥನ್, ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮಗೆ ಮೈಸೂರ್ ಪಾಕ್ ನೀಡುತ್ತಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿ, ಮೈಸೂರು ಪಾಕ್‌ಗೆ ತಮಿಳುನಾಡಿನ ಖಾದ್ಯ ಎಂದು ಭೌಗೋಳಿಕ ಮಾನ್ಯತೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾದ ತಕ್ಷಣ ರಾಜ್ಯದ ಜನತೆ ಸಾಮಾಜಿಕ ಜಾಲ ತಾಣಗಳ ಮೂಲಕ ಸಚಿವೆ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದರು.
ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ನಾಯಕರೂ ವಾಗ್ಧಾಳಿ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ಆಯ್ಕೆಯಾಗಿ ಯಾಕೆ ಈ ರೀತಿಯ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಮೈಸೂರು ಪಾಕ್‌ನಲ್ಲಿಯೇ ಅದರ ಮೂಲ ಯಾವುದು ಎಂದು ಹೆಸರಿದೆ. ಅದು ತಮಿಳುನಾಡಿನ ಮೂಲದ್ದಾಗಿದ್ದರೆ, ಅದನ್ನು ಮೈಸೂರು ಪಾಕ್ ಎಂದು ಕರೆಯದೇ ಮಧುರೈ ಪಾಕ್ ಎಂದು ಕರೆಯಬೇಕಿತ್ತು ಎಂದು ಹೇಳಿದ್ದಾರೆ. ಕೆಪಿಸಿಸಿ ಕೂಡ ಟ್ವಿಟ್ ಮೂಲಕ ವಾಗ್ಧಾಳಿ ನಡೆಸಿದೆ.
ವಿಷಯ ಗಂಭೀರವಾಗುತ್ತಿದ್ದಂತೆ ಆನಂದ್ ರಂಗನಾಥನ್ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಈ ಗೊಂದಲದಿಂದ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರು, ಆನಂದ್ ರಂಗನಾಥನ್ ಅವರ ಪರೋಕ್ಷ ಸಮರ್ಥನೆಗೆ ಮುಂದಾಗಿದ್ದು, ನೆಟ್ಟಿಗರೂ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.