Advertisement

ಪ್ರದರ್ಶನ ನಿಲ್ಲಿಸಿದ ‘ಸರಸ್ವತಿ’|ಇತಿಹಾಸದ ಪುಟ ಸೇರಿದ ಮತ್ತೊಂದು ಚಿತ್ರಮಂದಿರ

08:28 PM Sep 21, 2021 | Team Udayavani |

ಬೆಂಗಳೂರು: ಒಂದೆಡೆ ಮಲ್ಟಿಪ್ಲೆಕ್ಸ್ ಗಳ ಹಾವಳಿ ಮತ್ತೊಂದೆಡೆ ಮಹಾಮಾರಿ ಕೋವಿಡ್ ಸೋಂಕಿನ ಅಬ್ಬರದ ಹೊಡೆತಕ್ಕೆ ಸಿಲುಕಿ ರಾಜ್ಯದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನಲಗುವಂತಾಗಿವೆ.

Advertisement

ಇತ್ತೀಚಿನ ಕೆಲವು ವರ್ಷಗಳಲ್ಲಿ ಬೆಂಗಳೂರು,ಮೈಸೂರು,ಮಂಗಳೂರು,ಧಾರವಾಡ ಸೇರಿದಂತೆ ದೊಡ್ಡ-ದೊಡ್ಡ ನಗರಗಳಲ್ಲಿ ತಲೆ ಎತ್ತಿರುವ(ಎತ್ತುತ್ತಿರುವ) ಮಲ್ಟಿಪ್ಲೆಕ್ಸ್ ಗಳು ಸಿಂಗಲ್ ಸ್ಕ್ರೀನ್ ಸಿನಿಮಾ ಮಂದಿರಗಳನ್ನು ಅಪೋಶನ ತೆಗೆದುಕೊಳ್ಳುತ್ತಿವೆ. ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ ಸೋಂಕಿನಿಂದಾಗಿ ಥಿಯೇಟರ್ ಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಪರಿಣಾಮ ಶಾಶ್ವತವಾಗಿ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಿಸುತ್ತಿವೆ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನ ಮತ್ತೊಂದು ಚಿತ್ರಮಂದಿರ ತನ್ನ ಪ್ರದರ್ಶನ ನಿಲ್ಲಿಸುವ ಮೂಲಕ ಇತಿಹಾಸದ ಪುಟ ಸೇರಿದೆ.

ಮೈಸೂರಿನ ಪ್ರಸಿದ್ಧ ಸರಸ್ವತಿ ಚಿತ್ರಮಂದಿರ ಇದೀಗ ನೆನಪಿನಂಗಳಕ್ಕೆ ಸರಿದಿದ್ದು, ಕೋವಿಡ್ ಪರಿಣಾಮ ಕಳೆದ ಒಂದೂವರೆ ವರ್ಷದಿಂದ ಬಾಗಿಲು ತೆರೆಯದ ಕಾರಣ ಈ ಹಳೆಯ ಚಿತ್ರಮಂದಿರ ಶಾಶ್ವತವಾಗಿ ಬಾಗಿಲು ಮುಚ್ಚುವಂತಾಗಿದೆ. ಬಹು ವಿಶಾಲವಾದ ಮೈಸೂರಿನ ದೊಡ್ಡ ಚಿತ್ರಮಂದಿರ ಎಂದೇ ಪ್ರಸಿದ್ಧವಾಗಿದ್ದ ಸರಸ್ವತಿ ಚಿತ್ರಮಂದಿರ, ವರನಟ ಡಾ. ರಾಜ್ ಕುಮಾರ್ ಕುಟುಂಬ ಸದಸ್ಯರೊಂದಿಗೆ ಅತ್ಯಂತ ಆತ್ಮೀಯ ಒಡನಾಟ ಹೊಂದಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಹುತೇಕ ಚಿತ್ರಗಳು ಇದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿತ್ತು. ಆದರೀಗ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಸರಸ್ವತಿ ಚಿತ್ರಮಂದಿರ ಬಾಗಿಲು ಮುಚ್ಚಿದ್ದು, ಈ ಬಗ್ಗೆ ಮಾಲೀಕರಿಂದ ಸಿಗದ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಮಾಲೀಕರು ಚಿತ್ರಮಂದಿರವನ್ನು ಮುಚ್ಚಿ ಆ ಜಾಗವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಖಾತ್ರಿ ಇಲ್ಲ.

ಕೋವಿಡ್ ಸಂಕಷ್ಟದಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೈಸೂರಿನ ನಾಲ್ಕು ಪ್ರತಿಷ್ಠಿತ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಮೈಸೂರಿನ ಜನರಿಗೆ ಅತ್ಯಂತ ಚಿರಪರಿಚಿತವಾಗಿದ್ದ ಶಾಂತಲಾ, ಲಕ್ಷ್ಮಿ, ಶ್ರೀ ಟಾಕೀಸ್ ಚಿತ್ರಮಂದಿರ ಈಗಾಗಲೇ ಬಂದ್ ಆಗಿತ್ತು. ಇದೀಗ ಇದೇ ಸಾಲಿಗೆ ಸರಸ್ವತಿ ಚಿತ್ರಮಂದಿರವು ಸಹ ಸೇರ್ಪಡೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next