Advertisement

ರಾಜ್ಯ ರಾಜಕಾರಣದಲ್ಲಿ ಛಾಪು ಬೀರುವ ಮೈಸೂರು

12:50 AM Jan 16, 2023 | Team Udayavani |

ಈ ಪ್ರಾಂತದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಭಾರತೀಯ ಜನತಾಪಕ್ಷವು ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲೂ ಸರಳ ಬಹುಮತ ಪಡೆಯಲು ಸೋತಿದೆ. ಈ ನಿಟ್ಟಿನಲ್ಲಿ ಹಳೇ ಮೈಸೂರು ಭಾಗದ ರಾಜ ಕಾರಣಕ್ಕೆ ದಿಕ್ಕು ತೋರಿಸುವಂತೆ ಮೈಸೂರು ಜಿಲ್ಲಾ ರಾಜ ಕಾರಣದ ವಿದ್ಯಮಾನಗಳು ಮಹತ್ವದ್ದಾಗಿದೆ.

Advertisement

ಮೈಸೂರು 11 ಕ್ಷೇತ್ರಗಳು ಕ್ಷೇತ್ರ ದರ್ಶನ
ಮೈಸೂರು: ಕರ್ನಾಟಕದ ರಾಜಕಾರಣದಲ್ಲಿ ಲಾಗಾಯ್ತಿನಿಂದಲೂ ಪ್ರಭಾವ ಬೀರುತ್ತಿರುವ ಮೈಸೂರು ಜಿಲ್ಲಾ ರಾಜಕಾರಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದೆ.

ರಾಜ್ಯ ರಾಜಕಾರಣದಲ್ಲಿ ಹಳೇ ಮೈಸೂರು ಭಾಗದ ರಾಜಕಾರಣ ಅಧಿಕಾರದ ಗದ್ದುಗೆ ಏರುವ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇದಕ್ಕೆ ಅತ್ಯುತ್ತಮ ನಿದರ್ಶ ನವೆಂದರೆ ಈ ಪ್ರಾಂತದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಭಾರತೀಯ ಜನತಾಪಕ್ಷವು ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲೂ ಸರಳ ಬಹುಮತ ಪಡೆಯಲು ಸೋತಿದೆ. ಈ ನಿಟ್ಟಿನಲ್ಲಿ ಹಳೇ ಮೈಸೂರು ಭಾಗದ ರಾಜ ಕಾರಣಕ್ಕೆ ದಿಕ್ಕು ತೋರಿಸುವಂತೆ ಮೈಸೂರು ಜಿಲ್ಲಾ ರಾಜಕಾರಣದ ವಿದ್ಯಮಾನಗಳು ಮಹತ್ವದ್ದಾಗಿದೆ. ಮೈಸೂರು ಜಿಲ್ಲೆ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದೆ. ಮೊದಲು ಡಿ. ದೇವರಾಜ ಅರಸರು. ಅನಂತರ ಸಿದ್ದರಾ ಮಯ್ಯ. ಈ ಇಬ್ಬರೂ ಕಾಂಗ್ರೆಸ್‌ ಪಕ್ಷದಿಂದಲೇ ಮುಖ್ಯ ಮಂತ್ರಿ ಯಾದವರು. ರಾಜ್ಯದಲ್ಲಿ ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದ ಇಬ್ಬರು ಮುಖ್ಯಮಂತ್ರಿ ಗಳೂ ಇವರೇ. ಈ ಇಬ್ಬರೂ ಅಹಿಂದ ನೇತಾರರು. ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿವೆ. ತಿ.ನರಸೀಪುರ, ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಗಳು. ಹೆಗ್ಗಡದೇವನಕೋಟೆ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದೆ. ಇನ್ನು ಎಂಟು ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ.

ಪಿರಿಯಾಪಟ್ಟಣ
ಈ ವಿಧಾನಸಭಾ ಕ್ಷೇತ್ರದಲ್ಲಿ 1985 ರಿಂದಲೂ ಸತತವಾಗಿ ಸ್ಪರ್ಧಿಸುತ್ತಿರುವವರು ಮಾಜಿ ಸಚಿವ ಕೆ.ವೆಂಕಟೇಶ್‌. ಅವರು ಸೋಲು-ಗೆಲುವು ಎರಡೂ ಕಂಡಿದ್ದಾರೆ. ವೆಂಕಟೇಶ್‌ ಇಲ್ಲಿ ಅತೀ ಹೆಚ್ಚು ಐದು ಬಾರಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ನೀರಾವರಿ ಸಚಿವರಾಗಿದ್ದ ದಿವಂಗತ ಎಚ್‌.ಎಂ.ಚನ್ನಬಸಪ್ಪ ಅವರು ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಈವರೆಗೂ 15 ಬಾರಿ ಅಸೆಂಬ್ಲಿ ಚುನಾವಣೆ ನಡೆದಿದೆ. ಕಾಂಗ್ರೆಸ್‌ ಏಳು ಬಾರಿ, ಪಕ್ಷೇತರ, ಜನತಾ ಪಕ್ಷ, ಜೆಡಿಎಸ್‌ ತಲಾ ಎರಡು ಬಾರಿ, ಜನತಾದಳ, ಬಿಜೆಪಿ ತಲಾ ಒಂದು ಬಾರಿ ಇಲ್ಲಿ ಗೆಲುವು ಸಾಧಿಸಿದೆ.

ಹುಣಸೂರು

ನಾಡಿಗೆ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರವಿದು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಈ ಕ್ಷೇತ್ರವನ್ನು ಅತೀ ಹೆಚ್ಚು ಆರು ಬಾರಿ ಪ್ರತಿನಿಧಿಸಿದ್ದರು. ದೇವರಾಜ ಅರಸರು 1962ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಇಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಇತಿಹಾಸದಲ್ಲಿ ದಾಖಲಾಯಿತು. ದೇವರಾಜ ಅರಸರ ಪುತ್ರಿ ಚಂದ್ರಪ್ರಭಾ ಅರಸರು ಎರಡು ಬಾರಿ ಈ ಕ್ಷೇತ್ರ ಪ್ರತಿನಿಧಿಸಿ ಸಚಿವರೂ ಆಗಿದ್ದರು. 1957ರಲ್ಲಿ ಇದು ದ್ವಿಸದಸ್ಯ ಕ್ಷೇತ್ರವಾಗಿತ್ತು. ಈವರೆಗೂ 19 ಅಸೆಂಬ್ಲಿ ಚುನಾವಣೆಯನ್ನು ಇದು ಕಂಡಿದೆ. ಕಾಂಗ್ರೆಸ್‌ 12 ಬಾರಿ ಗೆದ್ದಿದೆ. ಜನತಾ ಪಕ್ಷ, ಬಿಜೆಪಿ, ಜೆಡಿಎಸ್‌ ತಲಾ ಎರಡು ಬಾರಿ, ಜನತಾದಳ ಒಂದು ಬಾರಿ ಇಲ್ಲಿ ಜಯಗಳಿಸಿದೆ. ಈ ಕ್ಷೇತ್ರದಲ್ಲಿ 2018ರಲ್ಲಿ ಅಡಗೂರು ಎಚ್‌.ವಿಶ್ವನಾಥ್‌ ಜೆಡಿಎಸ್‌ನಿಂದ ಗೆದ್ದು ಬಳಿಕ ಆಪರೇಶನ್‌ ಕಮಲದಲ್ಲಿ ಬಿಜೆಪಿ ಸೇರ್ಪಡೆಯಾದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡರು.

ನಂಜನಗೂಡು
ಇದು 1952ರಲ್ಲಿ ಒಮ್ಮೆ ಮಾತ್ರ ದ್ವಿಸದಸ್ಯ ಕ್ಷೇತ್ರವಾಗಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್‌, ಜನತಾಪರಿವಾರದ ಭದ್ರಕೋಟೆ. ಈ ಕ್ಷೇತ್ರವನ್ನು ಬಿಜೆಪಿ ಮೊದಲ ಬಾರಿಗೆ 2018ರ ಚುನಾವಣೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿತು. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 2008ರಿಂದ ಈ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. 2013ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅಂದು ಕಾಂಗ್ರೆಸ್‌ನಲ್ಲಿದ್ದ ವಿ.ಶ್ರೀನಿವಾಸಪ್ರಸಾದ್‌ ಅವರು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಸಚಿವ ಸಂಪುಟ ಪುನರ್‌ ರಚನೆ ವೇಳೆ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಇದನ್ನು ಪ್ರತಿಭಟಿಸಿ ಶ್ರೀನಿವಾಸಪ್ರಸಾದ್‌ ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಪರಾಭವಗೊಂಡರು. ಈ ಕ್ಷೇತ್ರ 17 ಬಾರಿ ವಿಧಾನಸಭಾ ಚುನಾವಣೆ ಎದುರಿಸಿದೆ. ಕಾಂಗ್ರೆಸ್‌ 11 ಬಾರಿ, ಎರಡು ಬಾರಿ ಪಕ್ಷೇತರ, ಪಿಎಸ್‌ಪಿ, ಜನತಾ ಪಕ್ಷ, ಜನತಾದಳ, ಜೆಡಿಎಸ್‌, ಬಿಜೆಪಿ ತಲಾ ಒಂದು ಬಾರಿ ವಿಜಯಮಾಲೆ ಧರಿಸಿದೆ.

Advertisement

ಕೆ.ಆರ್‌.ನಗರ
ಮಾಜಿ ಸಚಿವ, ಆಗ ಕಾಂಗ್ರೆಸ್‌ನಲ್ಲಿದ್ದ ಅಡಗೂರು ಎಚ್‌.ವಿಶ್ವನಾಥ್‌ ಹಾಗೂ ಜನತಾ ಪರಿವಾರದ ಎಸ್‌.ನಂಜಪ್ಪ ಅವರ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಡೆಯುತ್ತಿದ್ದ ಕ್ಷೇತ್ರವಿದು.

ಈ ಕ್ಷೇತ್ರದಲ್ಲಿ ಈವರೆಗೂ 15 ಬಾರಿ ಅಸೆಂಬ್ಲಿ ಚುನಾವಣೆ ನಡೆದಿದೆ. ಕಾಂಗ್ರೆಸ್‌ ಐದು ಬಾರಿ, ಜೆಡಿಎಸ್‌ ನಾಲ್ಕು ಬಾರಿ, ಪಕ್ಷೇತರರು ಮೂರು ಬಾರಿ, ಜನತಾಪಕ್ಷ ಎರಡು ಬಾರಿ, ಜನತಾದಳ ಒಂದು ಬಾರಿ ಗೆದ್ದಿದೆ. ಮಾಜಿ ಸಚಿವರಾದ ವಿಶ್ವನಾಥ್‌, ನಂಜಪ್ಪ, ಸಾ.ರಾ.ಮಹೇಶ್‌ ತಲಾ ಮೂರು ಬಾರಿ ಇಲ್ಲಿ ಜಯ ಸಾಧಿಸಿದ್ದಾರೆ.

ತಿ.ನರಸೀಪುರ
ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರವಾದ ಇದು ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ. ಈ ಭದ್ರಕೋಟೆಯನ್ನು ಭೇದಿಸಿದ ಜನತಾ ಪರಿವಾರದ ನಾಯಕರೇ ಅನಂತರ ಕಾಂಗ್ರೆಸ್‌ ಸೇರಿ ಮತ್ತೆ ಇಲ್ಲಿ ಕಾಂಗ್ರೆಸ್‌ ಗೆಲುವಿಗೆ ಕಾರಣರಾದರು. ಆದರೆ ಅಷ್ಟರಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕೂಡ ಇಲ್ಲಿ ತನ್ನ ನೆಲೆ ಕಂಡುಕೊಂಡಿತ್ತು. ಈ ಕ್ಷೇತ್ರದಲ್ಲಿ ವಿಧಾನಸಭೆಗೆ 15 ಬಾರಿ ಚುನಾವಣೆ ನಡೆದಿದೆ. ಕಾಂಗ್ರೆಸ್‌ 8 ಬಾರಿ, ಜನತಾಪಕ್ಷ, ಜೆಡಿಎಸ್‌ ತಲಾ ಎರಡು ಬಾರಿ, ಕೆಎಂಪಿಪಿ ಹಾಗೂ ಬಿಜೆಪಿ ತಲಾ ಒಂದು ಬಾರಿ ಇಲ್ಲಿ ಗೆಲುವು ಸಾಧಿಸಿದೆ. ಮಾಜಿ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಅತೀ ಹೆಚ್ಚು ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಎಚ್‌.ಡಿ.ಕೋಟೆ
ಈ ಕ್ಷೇತ್ರ 2008ರ ವರೆಗೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. 2008ರಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಯಿತು. ಈ ಕ್ಷೇತ್ರ 13 ಬಾರಿ ಅಸೆಂಬ್ಲಿ ಚುನಾವಣೆಯನ್ನು ಎದುರಿಸಿದೆ. ಕಾಂಗ್ರೆಸ್‌ ಆರು ಬಾರಿ, ಜೆಡಿಎಸ್‌ ಎರಡು ಬಾರಿ, ಸ್ವತಂತ್ರ ಪಾರ್ಟಿ, ಸಂಸ್ಥಾ ಕಾಂಗ್ರೆಸ್‌, ಜನತಾಪಕ್ಷ, ಸಮಾಜವಾದಿ ಜನತಾಪಕ್ಷ, ಜನತಾದಳ ತಲಾ ಒಂದು ಬಾರಿ ಇಲ್ಲಿ ಜಯ ಸಾಧಿಸಿದೆ.

ಕೃಷ್ಣರಾಜ
ಕಾಂಗ್ರೆಸ್‌, ಜನತಾ ಪರಿವಾರ, ಬಿಜೆಪಿ ಮೂರೂ ಪಕ್ಷಗಳಿಗೆ ಒಲಿದಿರುವ ಕ್ಷೇತ್ರವಿದು. ಮೈಸೂರು ನಗರದ ಈ ಕ್ಷೇತ್ರದಲ್ಲಿ 1967ರಲ್ಲಿ ಸಾಹುಕಾರ್‌ ಚನ್ನಯ್ಯ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ಸಂಸದ ವಿ.ಶ್ರೀನಿವಾಸಪ್ರಸಾದ್‌ ಈ ಕ್ಷೇತ್ರದಲ್ಲಿ 1974ರ ಉಪ ಚುನಾವಣೆಯಲ್ಲಿ ಎಡಿಎಂಕೆ ಅಭ್ಯರ್ಥಿಯಾಗಿ ಕಣಕ್ಕಿಳಿದ್ದು ಪರಾಭವಗೊಂಡಿದ್ದರು. ಬಂಗಾರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಎಸ್‌.ರಮೇಶ್‌ ಇಲ್ಲಿ 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಈವರೆಗೂ ಈ ಕ್ಷೇತ್ರದಲ್ಲಿ 16 ಬಾರಿ ವಿಧಾನಸಭಾ ಚುನಾವಣೆ ನಡೆದಿದೆ. ಕಾಂಗ್ರೆಸ್‌ ಏಳು ಬಾರಿ, ಪಕ್ಷೇತರ 1, ಜನತಾ ಪಕ್ಷ 2, ಬಿಜೆಪಿ 5, ಜೆಡಿಎಸ್‌ ಒಂದು ಬಾರಿ ಗೆದ್ದಿದೆ. ಈ ಕ್ಷೇತ್ರವನ್ನು ಬಿಜೆಪಿಯ ಎಸ್‌.ಎ.ರಾಮದಾಸ್‌ ಅತೀ ಹೆಚ್ಚು ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ.

ಚಾಮರಾಜ

ಮೈಸೂರು ನಗರದ ಈ ಕ್ಷೇತ್ರ ರಚನೆಯಾಗಿದ್ದೇ 1978ರಲ್ಲಿ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಈ ಕ್ಷೇತ್ರಕ್ಕೆ ಮೊದಲು ಲಗ್ಗೆ ಹಾಕಿದ್ದು ಜನತಾ ಪರಿವಾರ. ಅನಂತರ ಪ್ರಾಬಲ್ಯ ಮೆರೆದಿದ್ದು ಬಿಜೆಪಿ. ಈ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆದ್ದ ಹೆಗ್ಗಳಿಕೆ ಬಿಜೆಪಿಗಿದೆ. ಬಿಜೆಪಿಯ ಎಚ್‌.ಎಸ್‌.ಶಂಕರಲಿಂಗೇಗೌಡ ಅತೀ ಹೆಚ್ಚು ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಾಗ ಸಚಿವ ಸ್ಥಾನ ಸಿಗಲಿಲ್ಲ ಎಂದು ಈ ಪಕ್ಷ ತೊರೆದು 2013ರಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದು ಸೋತರು. ಈ ಕ್ಷೇತ್ರ 12 ಬಾರಿ ಅಸೆಂಬ್ಲಿ ಚುನಾವಣೆ ಎದುರಿಸಿದೆ. ಎರಡು ಬಾರಿ ಉಪ ಚುನಾವಣೆ ಕಂಡಿದೆ. ಜನತಾಪಕ್ಷಕ್ಕೆ ನಾಲ್ಕು ಬಾರಿ, ಕಾಂಗ್ರೆಸ್‌ ಮೂರು ಬಾರಿ, ಬಿಜೆಪಿ ಐದು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದೆ.

ನರಸಿಂಹರಾಜ
ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ಈ ಕೋಟೆಯನ್ನು ಒಮ್ಮೆ ಜನತಾಪಕ್ಷ, ಬಿಜೆಪಿ ಭೇದಿಸಿದ್ದು ಉಂಟು. ಮೈಸೂರು ನಗರದಲ್ಲಿರುವ ಈ ಕ್ಷೇತ್ರವನ್ನು ಸತತ ಐದು ಬಾರಿ ಪ್ರತಿನಿಧಿಸಿರುವವರು ಹಾಲಿ ಶಾಸಕ ಕಾಂಗ್ರೆಸ್‌ನ ತನ್ವೀರ್‌ ಸೇs…. ಬಿಜೆಪಿಯ ಇ. ಮಾರುತಿರಾವ್‌ 1994ರಲ್ಲಿ ಇಲ್ಲಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ಅನಂತರ ಈ ಕ್ಷೇತ್ರದಲ್ಲಿ ಬಿಜೆಪಿ ನಗೆ ಬೀರಿಲ್ಲ. ಈವರೆಗೂ ಇಲ್ಲಿ ನಡೆದಿರುವ 16 ವಿಧಾನಸಭಾ ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್‌ಗೆ ಒಲಿದಿದೆ ಎಂದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಗೊತ್ತಾಗಲಿದೆ. ಪಿಎಸ್‌ಪಿ, ಎಸ್‌ಎಸ್‌ಪಿ, ಜನತಾಪಕ್ಷ ಹಾಗೂ ಬಿಜೆಪಿ ತಲಾ ಒಂದು ಬಾರಿ, ಒಮ್ಮೆ ಪಕ್ಷೇತರರು ಇಲ್ಲಿ ಗೆದ್ದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದ ಅಜೀಜ್‌ ಸೇs… ಅತೀ ಹೆಚ್ಚು ಆರು ಬಾರಿ ಇಲ್ಲಿ ಜಯಗಳಿಸಿ ಸಚಿವರೂ ಆಗಿದ್ದರು.

ಚಾಮುಂಡೇಶ್ವರಿ
ವಿಧಾನಸಭೆಗೆ ಇಲ್ಲಿ 2006ರಲ್ಲಿ ನಡೆದ ಉಪ ಚುನಾವಣೆ ದೇಶದ ಗಮನ ಸೆಳೆದಿತ್ತು. ಆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಕಾಂಗ್ರೆಸ್‌ ಸೇರಿ ಕಣಕ್ಕಿಳಿದಿದ್ದ ಸಿದ್ದರಾಮಯ್ಯ 257 ಮತಗಳ ಅಂತರದಿಂದ ಅತ್ಯಂತ ಪ್ರಯಾಸದ ಗೆಲುವು ಸಾಧಿಸಿದರು. ಆದರೆ ಮುಖ್ಯಮಂತ್ರಿಯಾಗಿ 2018ರಲ್ಲಿ ಸ್ವಕ್ಷೇತ್ರ ವರುಣಾ ಬಿಟ್ಟು ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಸುಮಾರು 36 ಸಾವಿರ ಮತಗಳ ಅಂತರದಿಂದ ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರ ವಿರುದ್ಧ ಹೀನಾಯವಾಗಿ ಪರಾಭವಗೊಂಡರು. ಆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದ ಕಾರಣ ಅಲ್ಲಿ ಗೆದ್ದು ವಿಧಾನಸಭೆ ಮರು ಪ್ರವೇಶಿಸಿದರು ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದು ಇದೇ ಕ್ಷೇತ್ರದಿಂದ. ಅದು 1983ರ ಚುನಾವಣೆ. ಆಗ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದರು. ಜನತಾಪಕ್ಷ, ಜನತಾದಳ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳಿಂದ ಸಿದ್ದರಾಮಯ್ಯ ಇಲ್ಲಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ 16 ಬಾರಿ ಅಸೆಂಬ್ಲಿ ಚುನಾವಣೆ ನಡೆದಿದೆ. ಈ ಕ್ಷೇತ್ರ ಹತ್ತು ಬಾರಿ ಕಾಂಗ್ರೆಸ್‌ಗೆ ಒಲಿದಿದೆ. ಒಮ್ಮೆ ಪಕ್ಷೇತರ, ಜನತಾಪಕ್ಷ, ಜನತಾದಳ ತಲಾ ಒಂದು ಬಾರಿ, ಜೆಡಿಎಸ್‌ಗೆ ಮೂರು ಬಾರಿ ಇಲ್ಲಿ ಗೆಲುವಾಗಿದೆ. ಕಾಂಗ್ರೆಸ್‌ನಿಂದ ಎಂ. ರಾಜಶೇಖರಮೂರ್ತಿ ಹಾಗೂ ಜನತಾದಳದಿಂದ ಸಿದ್ದರಾಮಯ್ಯ ಇಲ್ಲಿ 1989ರಲ್ಲಿ ಮುಖಾಮುಖೀಯಾಗಿ ಸಿದ್ದರಾಮಯ್ಯ ಪರಾಭವಗೊಂಡಿದ್ದರು. ಸ್ವಾತಂತ್ರ್ಯ ಬಂದಾಗಿನಿಂದ ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಮರೀಚಿಕೆಯಾಗಿದೆ. ಸಿದ್ದರಾಮಯ್ಯ ಈ ಕ್ಷೇತ್ರವನ್ನು ಅತೀ ಹೆಚ್ಚು ಐದು ಬಾರಿ ಪ್ರತಿನಿಧಿಸಿದ್ದಾರೆ.

ವರುಣಾ
ಮೈಸೂರು, ನಂಜನಗೂಡು, ತಿ.ನರಸೀಪುರ ಈ ಮೂರು ತಾಲೂಕುಗಳ ಪ್ರದೇಶಗಳನ್ನು ಒಳಗೊಂಡಿರುವ ಕ್ಷೇತ್ರ ವರುಣ. ನಾಡಿಗೆ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರವಿದು. ಹೊಸದಾಗಿ 2008ರಲ್ಲಿ ರಚನೆಯಾದ ಕ್ಷೇತ್ರ. ಸಿದ್ದರಾಮಯ್ಯ 2008ರಲ್ಲಿ ಈ ಕ್ಷೇತ್ರದಿಂದ ಗೆದ್ದಾಗ ವಿಧಾನಸಭೆ ವಿಪಕ್ಷ ನಾಯಕರಾದರು. 2013ರಲ್ಲಿ ಗೆದ್ದಾಗ ಮುಖ್ಯಮಂತ್ರಿಯಾದರು. ಅವರ ಪಾಲಿಗೆ ಇದು ಅದೃಷ್ಟದ ಕ್ಷೇತ್ರ ಎಂಬ ಮಾತಿದೆ. ಈ ಕ್ಷೇತ್ರವನ್ನು 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ತಮ್ಮ ಪುತ್ರ ಡಾ| ಯತೀಂದ್ರ ಅವರಿಗೆ ಬಿಟ್ಟುಕೊಟ್ಟರು. ಡಾ| ಯತೀಂದ್ರ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. ಈ ಕ್ಷೇತ್ರದಲ್ಲಿ ಮೂರು ಬಾರಿ ಅಸೆಂಬ್ಲಿ ಚುನಾವಣೆ ನಡೆದಿದೆ. ಮೂರು ಬಾರಿಯೂ ಕಾಂಗ್ರೆಸ್‌ ಗೆದ್ದಿದೆ.

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next