ಮೈಸೂರು; ಜಿ ಟಿ ದೇವೇಗೌಡರಿಗೆ ಮುಡಾದಿಂದ ಜಮೀನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಪಕ್ಕ ಕುಳಿತು ಆರೋಪ ಮಾಡಿದ್ದಾರೆ. ಆದರೆ ಸಚಿವರು ಹೇಳಿರುವಂತೆ ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ 50-60 ವರ್ಷಗಳ ರಾಜಕಾರಣದಲ್ಲಿ ಯಾವುದೇ ಕಟ್ಟಡ ಕಟ್ಟಲು ಆಗಿಲ್ಲ. ನನ್ನ ತಂದೆಯಿಂದ ಬಂದಿರುವ ಜಮೀನಿನಲ್ಲಿ ಉತ್ತು ಬಿತ್ತು ಬೆಳೆ ಬೆಳೆದಿದ್ದೇನೆ. ಬಂಗಾರದ ಮನುಷ್ಯ ಚಲನಚಿತ್ರದಿಂದ ಪ್ರಭಾವಿತನಾಗಿ ಬೇಸಾಯ ಮಾಡಿದ್ದೇನೆ. ಪ್ರಗತಿಪರ ರೈತ ಎನಿಸಿಕೊಂಡಿದ್ದೇನೆ. ಆನಂತರವೂ ಕಾನೂನು ಬದ್ದವಾಗಿ ಜಮೀನು ಖರೀದಿಸಿದ್ದೇನೆ ಎಂದರು.
ನನ್ನಂತಹ ರಾಜಕಾರಣಿ ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲೇ ಇಲ್ಲ. ಮುಡಾದ 90% ಭಾಗ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ಈ ಭಾಗದಲ್ಲಿ ಅಂದಿನಿಂದ ಇಂದಿನವರೆಗೂ ನಾನು ಒಂದೇ ಒಂದು ನಿವೇಶನ ಪಡೆದಿಲ್ಲ. ಗೋವಿಂದರಾಜು ಮುಡಾ ಅಧ್ಯಕ್ಷರಾಗಿದ್ದಾಗ ಲಾಟರಿಯಲ್ಲಿ ಒಂದು ನಿವೇಶನ ಬಂದಿದೆ. 50×80 ಅಳತೆಯ ನಿವೇಶನ ಲಾಟಿರಿಯಲ್ಲಿ ಬಂದಿರುವುದನ್ನು ಹೊರತುಪಡಿಸಿದರೆ ಯಾವುದೇ ಒಂದು ನಿವೇಶನ ಪಡೆದಿಲ್ಲ. ನಗರಾಭಿವೃದ್ಧಿ ಸಚಿವರು ಸರಿಯಾಗಿ ನಡೆದುಕೊಂಡಿದ್ದರೇ ಎಲ್ಲರ ಬಂಡವಾಳ ಬಯಲಾಗುತ್ತಿತ್ತು. ಆದರೆ ನಗರಾಭಿವೃದ್ಧಿ ಸಚಿವರು ಸರಿಯಾಗಿ ನಡೆದುಕೊಂಡಿಲ್ಲ ಎಂದು ದೇವೇಗೌಡ ಹೇಳಿದರು.
ಮುಂದಿವರಿಸಿದ ಮುನಿಸು
ಜಿ.ಟಿ.ದೇವೆಗೌಡರು ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನಾಯಕರ ಜೊತೆ ಮುನಿಸು ಮುಂದುವರೆಸಿದರು. ಸಚಿವರ ಸುದ್ದಿಗೋಷ್ಠಿಯಲ್ಲಿ ಹೆಚ್.ಡಿ.ಕೆ, ಸಾ.ರಾ.ಮಹೇಶ್, ಮಂಜೇಗೌಡರ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನನಗೆ ನನ್ನ ಪ್ರಕರಣದ ಬಗ್ಗೆಯಷ್ಟೆ ಗೊತ್ತು. ಬೇರೆ ಯಾರು ಏನು ಮಾಡಿದ್ದಾರೆ ಗೊತ್ತಿಲ್ಲ ಎಂದು ಖಾರವಾಗಿ ಉತ್ತರಿಸಿದರು.
ಯಾರ ಮೇಲೆ ಆರೋಪ ಬಂದಿದೆ ಅವರೆ ಉತ್ತರ ಕೊಡುತ್ತಾರೆ ಎಂದು ಹೇಳುವ ಮೂಲಕ ಜೆ.ಡಿ.ಎಸ್ ನಾಯಕರ ವಿಚಾರವಾಗಿ ಸಮರ್ಥಿಸಿಕೊಳ್ಳಲು ಮುಂದಾಗಲಿಲ್ಲ.