Advertisement

ಮೈಸೂರು ದಸರಾ ವಿಶೇಷ: ಹೊಯ್ಸಳರ ವಾಸ್ತುಶಿಲ್ಪ , ಶಿಲ್ಪಕಲೆ ಅನಾವರಣ

04:13 PM Sep 20, 2022 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ಹೊಯ್ಸಳರ ಕಾಲದ ಸೋಮನಾಥಪುರದ ಚೆನ್ನಕೇಶವ ದೇಗುಲದ ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವ ಅನಾವರಣಗೊಳ್ಳಲಿದೆ.

Advertisement

ಕೊರೊನಾ ಸೊಂಕು ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಉತ್ಸವಕ್ಕೆ ಈ ಬಾರಿ ಜೀವ ಕಳೆ ಬಂದಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ವಿಶೇಷವಾಗಿ ನಡೆಸಲಾಗುತ್ತಿದೆ. ಈ ಬಾರಿ ರಾಜ್ಯ ಪ್ರಮುಖ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳು, ರಾಜ್ಯದ ಎಲ್ಲ ಜಿಲ್ಲೆಗಳ ಐತಿಹಾಸಿಕ ಮತ್ತು ಪ್ರಾಕೃತಿಕ ತಾಣಗಳನ್ನು ಪರಿಚಿಸುವ ಹಲವು ಸ್ತಬ್ಧಚಿತ್ರಗಳು ಜನಾಕರ್ಷಿಸಲಿವೆ. ಆಯಾಯಾ ಜಿಲ್ಲೆಯ ಜಿಐ (ಜಿಯಾಗ್ರಫಿಕಲ್‌ ಇಂಡಿಕೇಷನ್‌), ಕನ್ನಡ ನಾಡು-ನುಡಿ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.

ಈ ಬಾರಿ 43 ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಸೋಮನಾಥಪುರದ ಚನ್ನಕೇಶವ ದೇಗುಲ ಪ್ರಮುಖ ಆಕರ್ಷಣೆಯಾಗಿದೆ. ವಿಜಯದಶಮಿಯಂದು ನಡೆಯುವ ಮೆರವಣಿಗೆಯಂದು ಗಜಪಡೆಯಷ್ಟೇ ಸ್ತಬ್ಧಚಿತ್ರವೂ ಪ್ರಾಮುಖ್ಯತೆ ಪಡೆದುಕೊಂಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಲಾ ಒಂದರಂತೆ 31 ಸೇರಿದಂತೆ ವಿವಿಧ ಇಲಾಖೆಗಳಿಂದ ಒಟ್ಟು 43 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಭೌಗೋಳಿಕ, ಪ್ರಾಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಗೆ ಒತ್ತು: ಪ್ರತಿವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸರ್ಕಾರದ ವಿವಿಧ ಯೋಜನೆ ಹಾಗೂ ಪ್ರದೇಶಿಕ ಸಂಸ್ಕೃತಿ ಒಳಗೊಂಡ ಸ್ತಬ್ಧಚಿತ್ರಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ ಈ ಬಾರಿ ವಿಭಿನ್ನವಾಗಿ ಸ್ತಬ್ಧಚಿತ್ರ ಮೆರವಣಿಗೆ ಆಯೋಜಿಸಲು ದಸರಾ ಉಪಸಮಿತಿ ನಿರ್ಧರಿಸಿದೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳಿಗೆ ಆಯಾ ಜಿಲ್ಲೆಯ ಭೌಗೋಳಿಕ, ಐತಿಹಾಸಿಕ ಮತ್ತು ಪ್ರಾಕೃತಿಕ ಅಂಶಗಳನ್ನೇ ವಿಷಯ ವಸ್ತುವನ್ನಾಗಿಸಿಕೊಂಡು ನಿರ್ಮಿಸುವಂತೆ ತಿಳಿಸಲಾಗಿದ್ದು, ಈಗಾಗಲೇ ನಗರದ ಎಪಿಎಂಸಿ ಆವರಭದಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ಆರಂಭವಾಗಿದೆ.

ಬೆಳಕು ಚೆಲ್ಲುವ ಸ್ತಬ್ಧಚಿತ್ರಗಳು: ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಗೊಮಟೇಶ್ವರ, ಉಡುಪಿ ಜನರ ಜೀವನಾಧಾರವಾದ ಮೀನುಗಾರಿಕೆ, ಉತ್ತರ ಕನ್ನಡದ ಪ್ರಾಕೃತಿಕ ಸೊಬಗು, ಚಿಕ್ಕಮಗಳೂರಿನ ಐತಿಹಾಸಿಕ ತಾಣಗಳು, ಮಂಡ್ಯದ ಧಾರ್ಮಿಕ ಸ್ಥಳಗಳು, ಕೊಡಗು ಜಿಲ್ಲೆಯ ಕೊಡವರ ವೀರ ಪರಂಪರೆ, ಚಾಮರಾಜನರದಿಂದ ವನ್ಯಸಂಪತ್ತು, ಶಿವಮೊಗ್ಗದಿಂದ ಶರಣಪರಂಪರೆಯ ಶ್ರೇಷ್ಠ ಶರಣರಾದ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಒಳಗೊಂಡ
ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿರಲಿವೆ.ಇದರ ಜತೆಗೆ ಉಳಿದ ಜಿಲ್ಲೆಗಳಿಂದ ಒಂದು ಜಿಲ್ಲೆ-ಒಂದು ಒಂದು ಉತ್ಪನ್ನ ಕುರಿತು ಬೆಳಕು ಚೆಲ್ಲುವ ಸ್ತಬ್ಧಚಿತ್ರಗಳೂ ಇರಲಿವೆ.

Advertisement

ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸೇರ್ಪಡೆಗೆ ತಜ್ಞರು ತಿ.ನರಸೀಪುರ ತಾಲೂಕಿನ ಸೋಮನಾಥಪುರದಲ್ಲಿರುವ ಅತ್ಯದ್ಭುತ ವಾಸ್ತುಶಿಲ್ಪ, ಕಲೆಯನ್ನು ಹೊಂದಿರುವ ಚನ್ನಕೇಶವ ದೇಗುಲ ಪರಿಶೀಲಿಸಿರುವ ಹಿನ್ನೆಲೆ ಈ ಬಾರಿ ದಸರಾ ಉತ್ಸವದಲ್ಲಿ ದೇಗುಲದ ಪ್ರತಿಕೃತಿ ಇರುವ ಸ್ತಬ್ಧಚಿತ್ರ ನಿರ್ಮಾಣ ಮಾಡಲಾಗಿತ್ತಿದೆ. ಒಟ್ಟಾರೆ ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಚನ್ನಕೇಶವ ದೇಗುಲ ಪ್ರಮುಖ ಆಕರ್ಷಣೆಯಾಗಿದೆ.

ಮೆರವಣಿಗೆಯಲ್ಲಿ ಒಟ್ಟು 43 ಸ್ತಬ್ಧಚಿತ್ರ ಭಾಗಿ
ವಿಜಯದಶಮಿ ಜಂಬೂಸವಾರಿಯಂದು ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಗಳಿಂದ ತಲಾ ಒಂದರಂತೆ 31 ಸ್ಥಬ್ಧಚಿತ್ರ ಸ್ತಬ್ಧಚಿತ್ರ ಉಪಸಮಿತಿಯಿಂದ 03, 106 ವರ್ಷಗಳ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಂಡ ಮೈಸೂರು ವಿಶ್ವವಿದ್ಯಾಲಯ, ಸೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಲಿಡಕರ್‌, ಕೌಶಲ್ಯ ಕರ್ನಾಟಕ, ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳಿ, ಕಾವೇರಿ ನೀರಾವರಿ ನಿಗಮ ಹಾಗೂ ವಾರ್ತಾ ಇಲಾಖೆಯಿಂದ ತಲಾ ಒಂದರಂತೆ ಒಟ್ಟು 43 ಸ್ತಬ್ಧಚಿತ್ರಗಳು ಇರಲಿವೆ. ಸೆ.19ರಿಂದ ಮೈಸೂರಿನ ಎಪಿಎಂಸಿ ಬಳಿಯಿರುವ ಖಾಲಿ ಮಳಿಗೆಗಳಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ಆರಂಭವಾಗಿದ್ದು ಅ.3ಕ್ಕೆ ಮುಕ್ತಾಯವಾಗಲಿದೆ.

ವಾಹನಗಳ ಸುಸ್ತಿತಿಗೆ ಒತ್ತು
ದಸರಾ ಸ್ತಬ್ಧಚಿತ್ರ ಮೆರವಣಿಗೆ ವೇಳೆ ವಾಹನಗಳು ಕೆಟ್ಟುನಿಂತು ಮೆರವಣಿಗೆಗೆ ತೊಡಕಾಗುವುದನ್ನು ತಡೆಯುವ ಸಲುವಾಗಿ ಈ ಬಾರಿ ಸ್ತಬ್ಧಚಿತ್ರದಲ್ಲಿ ಭಾಗವಹಿಸುವ ವಾಹನಗಳ ಸುಸ್ತಿತಿ, ಎಫ್ಸಿ, ಫಿಟ್ನೆಸ್ ಸರ್ಟಿ ಫಿಕೆಟ್‌ಗಳನ್ನು ಪರಿಶೀಲಿಸಿ ಬಳಿಕ ಸ್ತಬ್ಧಚಿತ್ರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಪ್ರತಿ ಜಿಲ್ಲೆಯಿಂದ ಬರುವ ಸ್ತಬ್ಧಚಿತ್ರಗಳೊಂದಿಗೆ ಇಬ್ಬರು ಚಾಲಕರು ಮತ್ತು ಸಂಯೋಜನಾಧಿಕಾರಿ ಇರಲಿದ್ದಾರೆ. ಒಂದು ವೇಳೆ ಸ್ತಬ್ಧಚಿತ್ರದ ವಾಹನ ಕೆಟ್ಟುನಿಂತರೆ ಅದನ್ನು ಬೇರೆಡೆ ಸಾಗಿಸಲು ಮುಂಜಾಗ್ರತಾ ಕ್ರಮವಾಗಿ ಕ್ರೇನ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಬಾರಿಯ ದಸರಾ ಉತ್ಸವದಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಒಟ್ಟು 43 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿದ್ದು, ಇಗಾಗಲೇ ನಿರ್ಮಾಣ ಕಾರ್ಯವು ನಡೆಸಿದೆ. ಅ.3ರ ಹೊತ್ತಿಗೆ ಸ್ತಬ್ಧಚಿತ್ರ ಸಂಪೂರ್ಣ ಸಿದ್ಧಗೊಳಿಸಿರುವಂತೆ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲೆಗಳು ಐತಿಹಾಸಿಕ, ಪ್ರಾಕೃತಿಕ, ಭೌಗೋಳಿಕ ಮತ್ತು ಪಾರಂಪರಿಕ ಅಂಶಗಳನ್ನು ಇಟ್ಟುಕೊಂಡು ಸ್ತಬ್ಧಚಿತ್ರ ನಿರ್ಮಾಣ ಮಾಡಲಿವೆ.
● ಧನುಷ್‌, ಉಪ ವಿಶೇಷಾಧಿಕಾರಿ, ಸ್ತಬ್ಧಚಿತ್ರ ಉಪಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next