Advertisement

Mysore Dussehra Festival: ದಸರಾ ನಾಡ ಕುಸ್ತಿಗೆ 220 ಜೋಡಿ ಸಿದ್ಧ

02:39 PM Oct 09, 2023 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಾಡ ಕುಸ್ತಿಗೆ ಭಾನುವಾರ ಜೋಡಿ ಕಟ್ಟುವ ಪ್ರಕ್ರಿಯೆ ಮೈಸೂರಿನ ವಸ್ತುಪ್ರದರ್ಶನ ಆವರಣದ ಪಿ.ಕಾಂಳಿಂಗರಾವ್‌ ಗಾನ ಮಂಟಪದಲ್ಲಿ ನಡೆಯಿತು.

Advertisement

ಅ.15 ರಿಂದ 21 ರವರೆಗೆ ನಾಡ ಕುಸ್ತಿ ನಡೆಯಲಿದೆ. ಈ ಹಿನ್ನೆಲೆ ಪೂರ್ವಭಾವಿಯಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 500 ಕ್ಕೂ ಹೆಚ್ಚು ಕುಸ್ತಿ ಪಟುಗಳಿಗೆ ಜತೆ ಕಟ್ಟುವ ಪ್ರಕ್ರಿಯೆಗೆ ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್‌. ಶ್ರೀವತ್ಸ ಚಾಲನೆ ನೀಡಿದರು.

30ಜೋಡಿಗೆ ಸ್ಪರ್ಧೆ: ಕುಸ್ತಿಪಟುಗಳ ಹಿರಿತನ, ವಯಸ್ಸು, ತೂಕದ ಆಧಾರದಲ್ಲಿ 220 ಜತೆ(ಒಂದು ಜೋಡಿಗೆ ಇಬ್ಬರಂತೆ) ಕಟ್ಟಿದರು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಅಂದಾಜು ನೂರಕ್ಕೂ ಹೆಚ್ಚು ಮಂದಿ ಕುಸ್ತಿಪಟುಗಳು ಆಗಮಿಸಿದ್ದರು. ರಾಜ್ಯದ ನಾನಾ ಗರಡಿಗಳ 70ಕ್ಕೂ ಹೆಚ್ಚು ಮಂದಿ 17 ವರ್ಷದ ಒಳಪಟ್ಟ ಉದಯೋನ್ಮುಖ ಕುಸ್ತಿಪಟುಗಳು ಉತ್ಸಾಹದಿಂದ ಆಗಮಿಸಿದ್ದರು. ಆದರೆ, ಆಗಮಿಸಿದವರಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. 7 ದಿನ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಪ್ರತೀ ದಿನ 30 ಜೋಡಿಗೆ ಸ್ಪರ್ಧೆ ನಡೆಸಲಾಗುತ್ತದೆ. ಅದರ ಆಧಾರದಲ್ಲಿ 220 ಜೋಡಿ ಗುರುತಿಸಲಾಯಿತು.

ಅವಕಾಶ ದೊರೆಯಲಿಲ್ಲ: ಕೆಲ ಬಲಶಾಲಿ ಕುಸ್ತಿಪಟುಗಳಿಗೆ ನಾಡಕುಸ್ತಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇದ್ದರೂ ಅವರ ವಿರುದ್ಧ ಸೆಣೆಸಲು ಮತ್ತೂಬ್ಬ ಅಷ್ಟೇ ಸಾಮರ್ಥ್ಯದ ಕುಸ್ತಿ ಪಟು ಸಿಗದ ಹಿನ್ನೆಲೆ ಅವರಿಗೆ ನಾಡ ಕುಸ್ತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದೇ ನಿರಾಶರಾದರು. ಮತ್ತಷ್ಟು ಮಂದಿಗೆ ಕಾಲಾವಕಾಶದ ಕೊರತೆಯಿಂದಾಗಿ ದಸರಾ ನಾಡಕುಸ್ತಿಯಲ್ಲಿ ಸೆಣಸುವ ಅವಕಾಶ ದೊರೆಯಲಿಲ್ಲ. ಶಾಸಕ ಟಿ.ಎಸ್‌.ಶ್ರೀವತ್ಸ ಮಾತನಾಡಿ, ಕುಸ್ತಿ ಮೈಸೂರಿನ ಹಿರಿಮೆಯಾಗಿದ್ದು ದಸರಾ ಮಹೋತ್ಸವದಲ್ಲಿ ಮಾತ್ರ ಮನ್ನಣೆ ಸಿಗುತ್ತಿದೆ. ಹೀಗಾಗಿ ಕುಸ್ತಿ ಚಟುವಟಿಕೆ ವರ್ಷಪೂರ್ತಿ ನಡೆಯುವ ವಾತಾವರಣ ಸೃಷ್ಟಿಸಬೇಕಿದೆ ಎಂದರು.

ಬಹುಮಾನ: ಕುಸ್ತಿ ಉಪ ಸಮಿತಿ ಉಪ ವಿಶೇಷಾಧಿಕಾರಿ ನಂದಿನಿ ಮಾತನಾಡಿ, ನಾಡ ಕುಸ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಸಾಹುಕಾರ ಚೆನ್ನಯ್ಯ ಕಪ್‌, ಮೇಯರ್‌ ಕಪ್‌, ಮೈಸೂರು ಮಹಾರಾಜ ಒಡೆಯರ್‌ ಕಪ್‌, ನಗದು ಬಹುಮಾನ ನೀಡಲಾಗುತ್ತದೆ. ಇದೇ ರೀತಿ, ಪಂಜ ಕುಸ್ತಿ, ಪಾಯಿಂಟ್‌, ಮಾರ್ಫಿಟ್‌ ಕುಸ್ತಿ ಪಂದ್ಯ ಆಯೋಜಿಸಲಾಗುತ್ತದೆ ಎಂದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್‌, ಡಿಸಿಪಿಗಳಾದ ಮುತ್ತುರಾಜ್‌, ಜಾನ್ಹವಿ, ಕುಸ್ತಿ ಉಪ ಸಮಿತಿ ಕಾರ್ಯದರ್ಶಿ ರವಿಶಂಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next