ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಪೊಲೀಸರಿಗೆ ಸ್ಥಳದಲ್ಲಿ 34 ಸಾಕ್ಷಿ ಸಿಕ್ಕಿದೆ. ಅದರ ಮೇಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರ್ನಾಟಕ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಪ್ರಮಿಳಾ ನಾಯ್ಡು ಹೇಳಿದರು.
ಘಟನ ಸ್ಥಳಕ್ಕೆ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಘಟನೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದೆ. ಆದರೆ ವೈದ್ಯರ ಸಲಹೆ ಮೇರೆಗೆ ಅವರನ್ನು ಮಾತನಾಡಿಸಲಿಲ್ಲ. ಅವರ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಇಬ್ಬರೂ ಆಘಾತಗೊಂಡಿದ್ದಾರೆ. ಒಂದೆರಡು ದಿನದ ನಂತರ ಸಹಜ ಸ್ಥಿತಿಗೆ ಬರುತ್ತಾರೆ. ಯುವಕನ ಹಣೆಗೆ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಮೈಸೂರು ಪ್ರಕರಣ: ಮೊಬೈಲ್ ಟವರ್ ಲೊಕೇಶನ್ ಮೂಲಕ ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು
ಸದ್ಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಸಿಕ್ಕಿರುವ ಸುಳಿವುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕುಡಿದು ಕುಳಿತಿದ್ದವರು ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಹಿಳಾ ಆಯೋಗದಲ್ಲಿ ಸುಮೋಟೊ ಕೇಸ್ ದಾಖಲಾಗಿದೆ. ಇದು ಹೇಯ ಕೃತ್ಯ, ಇಂತಹ ಕೃತ್ಯಗಳು ನಡೆಯಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ ಎಂದು ಪ್ರಮಿಳಾ ನಾಯ್ಡು ಹೇಳಿದರು.