Advertisement
“ಯುವಾ’ ಹೆಸರೇ ಹೇಳುವಂತೆ ಇದೊಂದು ಯುವಜನರ ಸೇವಾ ಸಂಸ್ಥೆ. ಆದರಲ್ಲೂ ವಿದ್ಯಾರ್ಥಿಗಳಿಂದ ಸೃಷ್ಟಿಯಾದ ಸಂಸ್ಥೆ. ಯುವಾ ಎಂದರೆ “ಯೂತ್ ಯುನೈಟೆಡ್ ಫಾರ್ ವಿಷನ್ ಅಚೀವ್‌ಮೆಂಟ್’. 22 ಜೂನ್ 2012 ರಲ್ಲಿ ಆರಂಭವಾದ ಎನ್.ಜಿ.ಓ ಸಂಸ್ಥೆ ಇದಾಗಿದೆ. ಸಂಸ್ಥೆಯ ಮೂಲ ಉದ್ದೇಶ, ಯುವಶಕ್ತಿಯನ್ನು ಒಗ್ಗೂಡಿಸಿ, ಸಾಮಾಜಿಕ ಕಾರ್ಯಗಳ ಮೂಲಕ ದೇಶದ ಆಭಿವೃದ್ಧಿಗೆ ಶ್ರಮಿಸುವುದು.
ಯುವಾ ಸಂಸ್ಥೆಯ ಅಧ್ಯಕ್ಷ ಧರಂವೀರ್ ಸಿಂಗ್ ಎಂಬ ಯುವಕ ಮೂಲತಃ ರಾಜಸ್ಥಾನದವರು. ಹಲವಾರು ವರ್ಷಗಳಿಂದ ಮೈಸೂರಿನಲ್ಲಿ ಈತನ ಕುಟುಂಬ ನೆಲೆಸಿದೆ. ಪ್ರಸ್ತುತ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಈತ ಹತ್ತನೇ ತರಗತಿ (2010) ನಂತರ ರಜೆಯಲ್ಲಿ ಐದು ಜನ ಸ್ನೇಹಿತರೊಂದಿಗೆ ರಜೆಯ ಮಜಾ ಸವಿಯಲು ಪುತ್ತೂರಿನ ಬಳಿಯ ಸ್ನೇಹಿತನ ಮನೆಗೆ ಹೋದರು. ದಿನವಿಡೀ ಸುತ್ತಾಟ, ಆಟಗಳಲ್ಲಿ ಕಳೆದ ಹುಡುಗರು ಇಳಿ ಸಂಜೆಯಾಗುತ್ತಿದಂತೆ ಮನೆ ಸೇರಿದರು. ಸುಮಾರು 7-8 ಗಂಟೆಯಾದರೂ ಲೈಟ್‌ನ ಬೆಳಕು ಕಾಣಲಿಲ್ಲ. ಈ ಬಗ್ಗೆ ಗೆಳೆಯನನ್ನು ಕೇಳಿದಾಗ ತಿಳಿಯಿತು. ಆ ಗ್ರಾಮಕ್ಕೆ ಇನ್ನೂ ವಿದ್ಯುತ್‌ನ ಸಂಪರ್ಕ ಕಲ್ಪಿಸಿಲ್ಲ ಎಂದು. ಚಿಮಣಿ ದೀಪದಲ್ಲಿ ಓದುತ್ತಿದ್ದ ಮಕ್ಕಳು, ಮಂದ ಬೆಳಕಿನಲ್ಲಿ ಅಡುಗೆ ತಯಾರಿಸುತ್ತಿದ್ದ ಗೃಹಿಣಿಯರನ್ನು ಕಂಡು, ವಿದ್ಯುತ್ ಇಲ್ಲದೇ ಜೀವನ ಹೇಗೆಂದು ಅಖೀಲ್, ಧರ್ಮೇಂದರ್, ಮಾಲು, ಚೇತನ್, ಸಂಗೀತರೊಂದಿಗೆ ಚರ್ಚಿಸಿದಾಗ ಯುವಾ ಸಂಘಟನೆ ಹುಟ್ಟಿಕೊಂಡಿತು. 2012 ಜೂನ್‌ರಲ್ಲಿ “ಯುವಾ’ದ ಪ್ರಥಮ ಪ್ರಾಜೆಕ್ಟ್ ಮೂಲಕ ಪುತ್ತೂರಿನ ಬಳಿಯ “ಕಿನ್ಯಾ’ ಎಂಬ ಗ್ರಾಮದ 35 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಬೆಳಕು ನೀಡಲಾಯಿತು. ಮುಂದೆ ಎಚ್.ಡಿ.ಕೋಟೆ, ಪುತ್ತೂರು, ಹುಣಸೂರಿನ 30 ಮನೆಗಳಿಗೆ ಸೋಲಾರ್ ಬೆಳಕು ಬಂತು. ಕೇವಲ 24 ಗಂಟೆಗಳಲ್ಲಿ ಪುತ್ತೂರು ತಾಲೂಕಿನ ಕರ್ತೋಲಿ ಗ್ರಾಮ, ಸಣಕೆವಾಸೆ, ಕದ್ರಾ ಬಳಿಯ ಹಳ್ಳಿಗಳಲ್ಲಿ ವಿದ್ಯುತ್ ಬೆಳಕನ್ನು ಮೂಡಿಸಿದ್ದು ಸಾಧನೆ.
Related Articles
Advertisement
ಯುವಾ ಹಣ ಸಂಗ್ರಹಣೆಒಂದು ಮನೆಯನ್ನು ಸೋಲಾರ್ ದೀಪದಿಂದ ಬೆಳಗಲು ತಗುಲುವ ಅಂದಾಜು ವೆಚ್ಚ 4000 ರು.ಗಳು. “ಬೆಂಗಳೂರು ಲೈಟ್ ಆಪ್ ರೆವಲ್ಯೂಷನ್’ ಎಂಬ ಯೋಜನೆಗೆ ಅಂದಾಜು 6.5 ಲಕ್ಷ ಬಜೆಟ್. ಈ ಭಾರಿ ಮೊತ್ತದ ಹಣವನ್ನು ಸಂಗ್ರಹಿಸಲು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಈ ತಂಡವು ತಮ್ಮ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ ಮತ್ತು ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಯೋಜನೆಯನ್ನು ಸಂಘಟಿಸುತ್ತ ಹಣ ಸಂಗ್ರಹಿಸುತ್ತಾರೆ. 2014 ರಲ್ಲಿ ಗುಡ್ ವಿಲ್ ಸಂಸ್ಥೆ ಇವರ ಯೋಜನೆ ಗುರುತಿಸಿ 75 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಾಯ ಧನ ನೀಡಿದೆ. ಹಾಗೆಯೇ ಯುವಾ ಸಂಘಟನೆಯ ಪ್ರತಿಯೊಬ್ಬ ಸದಸ್ಯರೂ ಹಣ ವಿನಿಯೋಗಿಸುತ್ತಾರೆ. ಯೋಜನೆಗಳ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಹಳ್ಳಿಗಳಿಗೆ ತೆರಳುತ್ತಾರೆ. ವಿವೇಕಾನಂದರ ಮಾತಿನಂತೆ “ಏಳಿ, ಎದ್ದೇಳಿ. ಗುರಿ ಮುಟ್ಟುವ ತನಕ ಮುನ್ನುಗ್ಗಿ’ ಎನ್ನುವಂತೆ ಸಮಾಜದ ಅಭಿವೃದ್ಧಿಗೆ ತಮ್ಮದೊಂದು ಪಾಲನ್ನು ನೀಡುತ್ತಿರುವ “ಯುವಾ’ ಸಂಸ್ಥೆಯ ಯುವಜನತೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ಇರಲಿ. – ರಶ್ಮಿ ಟಿ., ದಾವಣಗೆರೆ