ಬೆಂಗಳೂರು: ಹುತಾತ್ಮ ಮೈಲಾರ ಮಹದೇವಪ್ಪ ಅವರ ತ್ಯಾಗ, ಬಲಿದಾನ ನಮಗೆಲ್ಲರಿಗೂ ಮಾರ್ಗದರ್ಶನ ಎಂದು ಕೇಂದ್ರ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಸೋಮವಾರ ಕೇಂದ್ರ ದೂರಸಂಪರ್ಕ ಸಚಿವಾಲಯ, ಗಾಂಧಿಸ್ಮಾರಕ ನಿಧಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹುತಾತ್ಮಕ ಮೈಲಾರ ಮಹದೇವಪ್ಪ ಅವರ ಸ್ಮರಣಾರ್ಥ ಹೊರತಂದಿದ್ದ ಅಂಚೆಚೀಟಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಗಾಂಧೀಜಿಯವರು ಕೈಗೊಂಡಿದ್ದ ದಂಡಿ ಸತ್ಯಾಗ್ರಹದಲ್ಲಿ ಮೈಲಾರ ಮಹದೇವಪ್ಪ ಅವರು ಸಕ್ರಿಯವಾಗಿದ್ದು, ಕರ್ನಾಟಕದಲ್ಲಿ ಬಹಳದೊಡ್ಡ ಸಾಧನೆ ಮಾಡಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಅದೆಷ್ಟೊ ಮಂದಿ ಹುತಾತ್ಮರಾಗಿದ್ದರು. ಈ ಸಾಲಿನಲ್ಲಿ ಮಹದೇವಪ್ಪ ಕೂಡ ಸೇರಿದ್ದಾರೆ. ಅವರ ತ್ಯಾಗ, ಬಲಿದಾನ ನಮಗೆ ಪ್ರೇರಣೆ, ಆದರ್ಶವಾಗಿದೆ ಎಂದರು.
ಮೈಲಾರ ಮಹದೇವಪ್ಪನವರ ವ್ಯಕ್ತಿತ್ವ ಹಾಗೂ ವಿಚಾರ ಧಾರೆಯನ್ನು ಎಂದಿಗೂ ಮರೆಯಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ಕೊನೆಯ ವರೆಗೂ ಗಾಂಧೀಜಿಯವರ ಪರವಾಗಿ ಅಖಂಡ ಕರ್ನಾಟಕದಲ್ಲಿ ದಂಡಿ ಸತ್ಯಾಗ್ರಹ ನಡೆಸಿದ ಮಹನ್ ಚೇತನ ಅವರು ಎಂದು ಬಣ್ಣಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಮಾಡು ಇಲ್ಲವೆ ಮಡಿ ಎಂದು ಗಾಂಧೀಜಿಯರವ ನೀಡಿದ ಘೋಷಣೆಯಂತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಧೀರ ನಮ್ಮ ಮೈಲಾರ ಮಹದೇವಪ್ಪ ಎಂದು ಸ್ಮರಿಸಿದರು. ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ಅಂಚೆ ಚೀಟಿ ಹೊರತರುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ.
ಈ ಸಂಬಂಧ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಮಹತ್ಮಗಾಂಧಿಯವರು ನಡೆಸಿದ ಉಪ್ಪಿನ ಸತ್ಯಾಗ್ರಹದಲ್ಲಿ ಮೈಲಾರ ಮಹದೇವಪ್ಪ ಅವರು ಭಾಗವಹಿಸಿರುವ ಭಾವಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ನೆರೆದಿದ್ದವರು ಮೆಚ್ಚುಗೆಗೆ ಪಾತ್ರವಾಗಿತ್ತು.
ಸಂಸದ ಶಿವಕುಮಾರ್ ಉದಾಸಿ, ಕರ್ನಾಟಕ ವೃತ್ತದ ಚೀಫ್ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಮೈಲಾರ ಮಹದೇವಪ್ಪ ಅವರ ಪುತ್ರಿ ಕಸ್ತೂರಿ ದೇವಿ ಲಿಂಗಯ್ಯ ಮೊದಲಾದವರು ಇದ್ದರು.