Advertisement

“ನನ್ನ ಆ ಕಳಪೆ ಬ್ಯಾಟಿಂಗ್‌ಜೀವನಪೂರ್ತಿ ಕಾಡಲಿದೆ’

07:30 AM Mar 22, 2018 | Team Udayavani |

ಚೆನ್ನೈ: ಶ್ರೀಲಂಕಾದಲ್ಲಿ ಮುಗಿದ ತ್ರಿಕೋನ ಟಿ20 ಸರಣಿಯಲ್ಲಿ ಇಬ್ಬರ ಹೆಸರು ಅತಿ ಹೆಚ್ಚು ಚರ್ಚೆಗೊಳಗಾದವು. ಕೊನೆಯ ಎಸೆತಕ್ಕೆ ಸಿಕ್ಸರ್‌ ಹೊಡೆದ ದಿನೇಶ್‌ ಕಾರ್ತಿಕ್‌ ಒಬ್ಬರಾದರೆ, ಕಳಪೆ ಬ್ಯಾಟಿಂಗ್‌ನಿಂದ ಭಾರತವನ್ನು ಸೋಲಿನತ್ತ ನೂಕಿದ್ದ ವಿಜಯ್‌ ಶಂಕರ್‌ ಇನ್ನೊಬ್ಬರು. 

Advertisement

19 ಎಸೆತ ಎದುರಿಸಿ ಕೇವಲ 17 ರನ್‌ ಮಾಡಿ ಎಲ್ಲರ ಟೀಕೆಗೊಳಗಾದ ವಿಜಯ್‌ ಶಂಕರ್‌ಗೆ ಈಗಲೂ ಆ ನೋವನ್ನು ಮರೆಯಲಾಗುತ್ತಿಲ್ಲವಂತೆ. ಇಡೀ ಜೀವನಪೂರ್ತಿ ತನ್ನನ್ನು ಕಾಡುವ ಘಟನೆಯದು ಎಂದು ಅವರು ಹೇಳಿಕೊಂಡಿದ್ದಾರೆ.
“ನಾನು ಔಟಾಗಿ ಮರಳಿದ ಅನಂತರ ನಡಿದಿದ್ದೇನೆಂದು ಬಹಳ ಯೋಚಿಸಿದ್ದೇನೆ. ಒಂದು ವೇಳೆ ದಿನೇಶ್‌ ಕಾರ್ತಿಕ್‌ ಸಿಕ್ಸರ್‌ ಬಾರಿಸದಿದ್ದರೆ, ಭಾರತ ಸೋತಿದ್ದರೆ ನನ್ನ ಪಾಡು ಏನಾಗುತ್ತಿತ್ತು ಎಂದು ಕಲ್ಪಿಸಿಕೊಂಡಿದ್ದೇನೆ. ಆ ಎಸೆತಗಳನ್ನು ನಾನು ವ್ಯರ್ಥ ಮಾಡ ದಿದ್ದರೆ ಏನಾಗುತ್ತಿತ್ತು ಎಂದೂ ಯೋಚಿಸಿದ್ದೇನೆ. ಬಹುಶಃ ನಾವಿನ್ನೂ ಸುಲಭವಾಗಿ ಗೆಲ್ಲುತ್ತಿದ್ದೆವು. ಏನೇ ಇರಲಿ, ಭಾರತವನ್ನು ಗೆಲ್ಲಿಸಿದ ದಿನೇಶ್‌ ಕಾರ್ತಿಕ್‌ಗೆ ಧನ್ಯವಾದಗಳು. ಇದೇ ಸಂದರ್ಭದಲ್ಲಿ ಪಂದ್ಯವನ್ನು ಗೆಲ್ಲಿಸಲಾಗದಿದ್ದಕ್ಕೆ ನನಗೆ ತೀವ್ರ ಪಶ್ಚಾತ್ತಾಪವಿದೆ’ ಎಂದು ಆಲ್‌ರೌಂಡರ್‌ ವಿಜಯ್‌ ಶಂಕರ್‌ ಹೇಳಿಕೊಂಡಿದ್ದಾರೆ.

“ನನ್ನ ಸ್ಥಿತಿ ಗೊತ್ತಿರುವುದರಿಂದ ನನ್ನ ಕುಟುಂಬವರ್ಗ, ಸ್ನೇಹಿತರು ಈ ಬಗ್ಗೆ ನನ್ನಲ್ಲಿ ಚರ್ಚಿಸುತ್ತಿಲ್ಲ. ಬದಲಿಗೆ ಸಾಮಾಜಿಕ ತಾಣದಲ್ಲಿ ಏನು ಹೇಳುತ್ತಿದ್ದಾರೆ ಎನ್ನುವುದಕ್ಕೆ ತಲೆ ಕೆಡಿಸಿಕೊಳ್ಳಬೇಡ ಎಂದು ಸಂದೇಶ ಕಳುಹಿಸಿದ್ದಾರೆ. ಈ ಸಂದೇಶಗಳಿಂದ ಯಾವುದೇ ಪ್ರಯೋಜನವಿಲ್ಲ. ನಾನು ಅದನ್ನೆಲ್ಲ ಮರೆತು ಮುಂದುವರಿಯಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದ್ದಾರೆ.

ಸಮಾಧಾನಪಡಿಸಿದ್ದೇ ಕಾರ್ತಿಕ್‌!
ತನ್ನ ಇನ್ನಿಂಗ್ಸ್‌ ಬಳಿಕ ತೀವ್ರ ಆಘಾತಕ್ಕೊಳಗಾಗಿದ್ದ ವಿಜಯ್‌ ಶಂಕರ್‌ಗೆ ಸಮಾಧಾನಪಡಿಸಿದ್ದು ಪಂದ್ಯವನ್ನು ಗೆಲ್ಲಿಸಿದ ದಿನೇಶ್‌ ಕಾರ್ತಿಕ್‌. ಹೊಟೇಲ್‌ ಕೊಠಡಿಯಲ್ಲಿ ಬೇಸರದಿಂದ ಕುಳಿತಿದ್ದ ವಿಜಯ್‌ಗೆ ಬಾಗಿ ಲನ್ನು ಬಡಿದ ಸದ್ದು ಕೇಳಿಸಿತು. ತೆರೆದರೆ ಕಾಣಿಸಿದ್ದು ಕಾರ್ತಿಕ್‌ ಮುಖ. “ನಿನ್ನ ಮೇಲೆಯೇ ನೀನು ಬೇಸರಗೊಳ್ಳಬೇಡ. ಮರೆತು ಬಿಡು, ಮುನ್ನುಗ್ಗು. ನಾನೂ ಇಂಥ ಬಹಳ ಸನ್ನಿವೇಶಗಳನ್ನು ಎದುರಿಸಿದ್ದೇನೆ. ಅದರಲ್ಲೇ ಮುಳುಗುವ ಅಭ್ಯಾಸ ಬೆಳೆಸಿಕೊಂಡರೆ ಅದೇ ತಪ್ಪನ್ನು ಪುನರಾವರ್ತಿಸುತ್ತೀಯ. ಈ ತಪ್ಪು ಗಳಿಂದ ಕಲಿತು ನಿನ್ನ ಸಾಮರ್ಥ್ಯ ತೋರುವುದನ್ನು ಅಭ್ಯಾಸ ಮಾಡಿಕೊ’ ಎಂದು ಕಾರ್ತಿಕ್‌ ಹೇಳಿದರು. ಈ ಮಾತುಗಳು ವಿಜಯ್‌ ಶಂಕರ್‌ಗೆ ಉತ್ಸಾಹ ನೀಡಿದವು.

ಕಾರ್ತಿಕ್‌, ವಿಜಯ್‌ ಶಂಕರ್‌ ಇಬ್ಬರೂ ತಮಿಳುನಾಡು ಆಟಗಾರರು. ಕಾರ್ತಿಕ್‌ ಹಿರಿಯ ಆಟಗಾರನಾಗಿ ಮುಂಚಿನಿಂದಲೂ ವಿಜಯ್‌ಗೆ ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ಈ ಆಘಾತಕಾರಿ ಸಂದರ್ಭದಲ್ಲಿ ಮತ್ತೆ ನೆರವಿಗೆ ಬಂದು ವಿಜಯ್‌ ಸುಧಾರಿಸಿಕೊಳ್ಳಲು ಕಾರಣವಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next