ಚಂಡೀಗಢ್: ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಭ್ರಷ್ಟಾಚಾರ ನಿಗ್ರಹ ಸಹಾಯವಾಣಿಯನ್ನು ಆರಂಭಿಸುವುದಾಗಿ ಗುರುವಾರ (ಮಾರ್ಚ್ 17) ಘೋಷಿಸಿದ್ದಾರೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ನಾಗಾಲೋಟ; 17,200 ಅಂಕ ದಾಟಿದ ನಿಫ್ಟಿ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ, ತಾನು ಒಂದು ದಿನವನ್ನೂ ವ್ಯರ್ಥ ಮಾಡುವುದಿಲ್ಲ ಎಂದು ಭಗವಂತ್ ಮಾನ್ ಘೋಷಿಸಿದ್ದರು. ಆ ನಿಟ್ಟಿನಲ್ಲಿ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುತಾತ್ಮ ದಿನಾಚರಣೆಯಾದ ಮಾರ್ಚ್ 23ರಂದು ಸಹಾಯವಾಣಿ ನಂಬರ್ ಅನ್ನು ಜಾರಿಗೊಳಿಸುವುದಾಗಿ ಸಿಎಂ ಮಾನ್ ತಿಳಿಸಿದ್ದಾರೆ.
ಒಂದು ವೇಳೆ ಯಾರಾದರು ಲಂಚ ಕೇಳಿದರೆ ಅದರ ಆಡಿಯೋ ಅಥವಾ ವಿಡಿಯೋವನ್ನು ನನ್ನ (ಮುಖ್ಯಮಂತ್ರಿ) ವಾಟ್ಸಪ್ ನಂಬರ್ ಗೆ ಕಳುಹಿಸಿಕೊಡಿ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ನಾನು ಸರ್ಕಾರಿ ನೌಕರರನ್ನು ಬೆದರಿಸುತ್ತಿಲ್ಲ. ಶೇ.99ರಷ್ಟು ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕರಾಗಿದ್ದಾರೆ. ಆದರೆ ಶೇ.1ರಷ್ಟು ಸರ್ಕಾರಿ ನೌಕರರು ಭ್ರಷ್ಟರಾಗಿದ್ದಾರೆ. ಆದ್ದರಿಂದ ಆಮ್ ಆದ್ಮಿ ಪಕ್ಷ ಮಾತ್ರ ಈ ಭ್ರಷ್ಟ ವ್ಯವಸ್ಥೆಯನ್ನು ಸ್ವಚ್ಛಗೊಳಿಸಬಲ್ಲದು ಎಂದು ಮಾನ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ನಂಬರ್ ನನ್ನದೇ ವಾಟ್ಸಪ್ ನಂಬರ್ ಆಗಿದ್ದು, ಯಾವುದೇ ಅಧಿಕಾರಿ ಲಂಚ ಕೇಳಿದರೆ ಜನರು ಅದರ ವಿಡಿಯೋ ಅಥವಾ ಆಡಿಯೋವನ್ನು ವಾಟ್ಸಪ್ ಗೆ ಕಳುಹಿಸಲಿ. ನಂತರ ಅಧಿಕಾರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಮಾನ್ ಹೇಳಿದ್ದಾರೆ.