Advertisement
ತಿಂಗಳ ರಜಾ ಸಮಯದಲ್ಲಿ ಹೆಣ್ಮಕ್ಕಳನ್ನು ಕಾಡುವ ಕೈಕಾಲು ಸೆಳೆತ, ಹೊಟ್ಟೆನೋವು, ವಾಕರಿಕೆಯ ಫೀಲಿಂಗ್, ತಲೆನೋವು, ಆಹಾರ ರುಚಿಸದೆ ಇರುವುದು, ವಿಶ್ರಾಂತಿಯ ಹಂಬಲ ಇವೆಲ್ಲದರ ಅರಿವು ಕೇವಲ ಅನುಭವಿಸಿದ ಸ್ತ್ರೀಯರಿಗೇ ತಿಳಿದಿರುತ್ತದೆ ಹೊರತು ಅನ್ಯರಿಗಲ್ಲ. ಕೆಲವಾರು ಕಡೆಗಳಲ್ಲಿ ಆ ದಿನಗಳಲ್ಲಿ ಋತು ಚಕ್ರದ ರಜಾ ನೀಡಲು ಬೇಡಿಕೆ ಬರುತ್ತಿದೆ. ಪ್ರಶ್ನೆ ಏನೆಂದರೆ, ಅಂಥ ವಿಚಾರಗಳಲ್ಲಿ ರಜಾ ಪ್ರಸ್ತಾಪಕ್ಕೆ ಗಮನ ಸೆಳೆಯುವ ನಿಲುವಳಿ ಬರುವುದು ಪುರುಷರಿಂದಲೇ ಆಗಬೇಕಾ? ಅದರ ವಿವಿಧ ಆಯಾಮಗಳನ್ನು ಪರಿಶೀಲಿಸುವ ಕಾರ್ಯ ಮಹಿಳಾ ಅಧಿಕಾರಿಗಳು ನಡೆಸಿ ತೀರ್ಮಾನ ಕೈಗೊಂಡರೆ ಫಲಪ್ರದವಾಗಬಲ್ಲುದು. ಇಲ್ಲಿ ಸಮಸ್ಯೆ ಏನೆಂದರೆ, ಉದ್ಯೋಗಸ್ಥ ಮಹಿಳೆಯರೆಲ್ಲರ ತಿಂಗಳ ರಜೆ ಒಟ್ಟಿಗೆ ಬಾರದು. ಹಾಗೆಂದು, ಇದರಲ್ಲಿ ಆ ದಿನಗಳ ನೋವು, ಸಂಕಟ ಅರಿತ ಮಹಿಳೆಯರು ಅಗತ್ಯವಾಗಿ ಇರಬೇಕು ಎಂಬುದೇ ವಾಸ್ತವ. ಅಂಥ ನೋವಿನ ದಿನಗಳಲ್ಲಿ ಮಹಿಳೆ ನಿಸ್ತೇಜವಾಗಿ, ಅಶಕ್ತತೆಯಿಂದ ಕೂಡಿರುವಾಗ ನಿತ್ಯದ ಉಲ್ಲಾಸ, ಆಸಕ್ತಿ ಇರದು. ಹಾಗೆಂದು ಪ್ರತಿಯೊಬ್ಬರಿಗೂ ಇದೇ ಯಾತನೆ ಕಾಡುತ್ತದೆ ಎನ್ನುವಂತಿಲ್ಲ. ಅತೀತರೂ ಇರಬಹುದು. ನೌಕರಿ ಮಾಡುವ ಸ್ತ್ರೀಯರಿಗೆ ರಜಾ ಸೌಲಭ್ಯ ನೀಡಿದರೆ, ಮನೆಯ ಗೃಹಿಣಿಗೆ ರಜಾ ಇಲ್ಲ. ಹೆಚ್ಚೆಚ್ಚು ಕೇಳಿಬರುವ ತಿಂಗಳ ಮುಟ್ಟಿನ ರಜಾದ ಪ್ರಸ್ತಾಪದ ಹಿನ್ನಲೆಯಲ್ಲಿ ಅದರ ತೀರ್ಮಾನಕ್ಕೆ ಮಹಿಳೆಯರೇ ಬೇಕು- ಹೆತ್ತವರಿಗೇ ತಾನೇ ಹೆರಿಗೆ ನೋವು ಗೊತ್ತು ಎಂಬ ಗಾದೆ ಮಾತಿನಂತೆ.ಪ್ರಕೃತಿ ಈ ಬಗ್ಗೆ ಎಲ್ಲ ಹೆಣ್ಮಕ್ಕಳಿಗೆ ಸಮಾನ ನೀತಿಯನ್ನು ಅನುಸರಿಸುತ್ತಿದೆ. ಪ್ರತಿ ಹೆಣ್ಮಗಳೂ ಹದಿಹರೆಯಕ್ಕೆ ಕಾಲಿಡುವ ಮುನ್ಸೂಚನೆ ಅದು.
Related Articles
Advertisement
ಮೂರು ದಿನಗಳ ಹಕ್ಕಿಸ್ಯಾನಿಟರಿ ನ್ಯಾಪಿನ್‌ಗಳ ಜಾಹೀರಾತುಗಳಲ್ಲಿ ತೋರಿಸುವಂತೆ ಆ ಮೂರು ದಿನಗಳಲ್ಲಿ ಹಕ್ಕಿಯಂತೆ ಹಾರಿಕೊಂಡು ಇರಲು ಸಾಧ್ಯವಾಗುವುದು ಬೆರೆಳೆಣಿಕೆಯ ಬಾಲೆಯರಿಗೆ ಮಾತ್ರ. ಸಂಪ್ರದಾಯಸ್ಥ ಮನೆಗಳಲ್ಲಿ ಮೊದಲಿನ ದಿನದಲ್ಲಿ ದೂರವಾಗಿದ್ದುಕೊಂಡು, ನಾಲ್ಕನೆ ದಿನ ಬೆಳಗ್ಗೆದ್ದು ತಣ್ಣೀರಾಭಿಷೇಕವಾಗಿ ಮನೆಯ ಎಲ್ಲ ಕಡೆಗೂ ಪ್ರವೇಶ ದೊರೆತರೂ ಒದ್ದೆ ಒಣಗದ ಕೂದಲು ಬಾಚಿ ಕ್ಲಾಸಿಗೆ ಹೋದರೆ ಗೊತ್ತಿದ್ದೂ ಕಿಚಾಯಿಸುವ ಹುಡುಗಿಯರಿಗೆ ಕಡಿಮೆಯೇನಿಲ್ಲ. ಅವರಿಗೂ ತಪ್ಪಿದ್ದಲ್ಲ ನಿಜ. ಆ ದಿನದ ಅವಧಿಯಲ್ಲಿ ಶರೀರದಲ್ಲಿ ಸೂಸುವ ವಿಚಿತ್ರ ಸೆ¾ಲ್ ಅನುಭವಸ್ಥ ವಿದ್ಯಾರ್ಥಿನಿಯರಿಗೆ ಗೊತ್ತಾಗಿ ಅವರುಗಳು ಕ್ಲಾಸಿನಲ್ಲಿ ತುಸು ಸರಿದು ಕೂತರೆ ಆಗುವ ನೋವು ಕಡಿಮೆಯಲ್ಲ. ಮೊದಲೆ ಮುಜುಗರ; ಅದರ ಮೇಲಿಂದ ಈ ಕಣ್ಣಿಗೆ ಕಾಣದ ಹಿಂಸೆ. ಶಾಲೆಗೆ ರಜೆ ಇದ್ದಾಗ ಈ ರಜೆ ಬರಲಿ ಎಂಬಾಸೆ ಇದ್ದರೂ ಅದೆಂತು ಸಾಧ್ಯ? ರಜಾದಿನಗಳ ಈ ರಜೆಯಲ್ಲಿ ಸಿಗುತ್ತಿದ್ದ ಸ್ವಾತಂತ್ರ್ಯವೆಂದರೆ ಬೇಕಾದ ಹೊತ್ತಿಗೆ ಬೆಳಗ್ಗೆದ್ದರೂ ಕೇಳಿದವರಿಲ್ಲ. ತಿಂಡಿ ಮುಗಿಸಿ ಮಗದೊಮ್ಮೆ ಚಾಪೆ ಬಿಡಿಸಿ ಕಾಲು ಚಾಚಿದರೂ ಆಕ್ಷೇಪಿಸುವವರಿಲ್ಲ. ಝರೋì ಎಂದು ಸುರಿಯುವ ಮಳೆಗೆ ಹಾಯಾಗಿ ಮಲಗಿ ಎದ್ದು, ಕೂತ ಕಡೆಗೆ ಊಟ, ತಿಂಡಿ, ಅನ್ಯ ಉಪಚಾರ ಬರುವಾಗ ಯಾವಾಗ ರಜಾ ಸಿಗುತ್ತೋ ಎಂದು ಕಾಯುವಾಸೆ ಇದ್ದರೆ ತಪ್ಪಿಲ್ಲ. ಸ್ಯಾನಿಟರಿ ನ್ಯಾಪ್‌ಕಿನ್ ಬಳಸಿ ಬಿಸಾಡಬಹುದು (ಎಲ್ಲಿಗೆ?) ಟ್ಯಾಂಪೂನ್‌ಗಳ ಬಳಕೆ ಕಲಿತರೆ ಅದು ವರ ಎಂದರೆ ತಪ್ಪೇನಿಲ್ಲ.ವಿದೇಶಗಳಲ್ಲಿ ಮೆನ್ಸುವಲ್ ಕಪ್ಸ್ ಬಳಕೆಯಿದೆ ಎಂದು ಕೇಳಿದ್ದಿದೆ. ಇದರ ಅವಧಿ ದೀರ್ಘಕಾಲಕ್ಕೆ ಉಳಿಯುತ್ತದೆ ಎಂದವರಿದ್ದಾರೆ. ತಿಂಗಳಲ್ಲಿ ಮೂರು-ನಾಲ್ಕು ದಿನ ತಪ್ಪದೆ ಅನುಭವಿಸುವ ಈ ಪ್ರಕ್ರಿಯೆ ಶಾಲಾ, ಕಾಲೇಜು, ನೌಕರಿ ಎಂದು ಹೊರಗಡೆ ಇರುವಾಗ ಶಾರೀರಿಕ ಹಿಂಸೆ, ಅನ್ ಇಸಿನೆಸ್ ಕಾಡುವಾಗ ನಿಭಾಯಿಸಲು ಬಲುಕಷ್ಟ. ಒಬ್ಟಾಕೆ ಸ್ತ್ರೀಯ ಮುಖ ನೋಡಿದರೆ ಇನ್ನೊಬ್ಬ ಹೆಣ್ಣಿಗೆ ಆಕೆಗೆ ಇದು ಮುಟ್ಟಿನ ದಿನಗಳು ಎಂದು ಅರ್ಥವಾಗುವ ಮಟ್ಟಿಗೆ ಮೋರೆಯಲ್ಲಿ ಬದಲಾವಣೆ ಇರುತ್ತದೆ. ಕೆಲವರು ಹೇಳಿಕೊಳ್ತಾರೆ, ಹಲವರು ಮುಚ್ಚಿಟ್ಟುಕೊಳ್ಳುತ್ತಾರೆ. ಇಂದಿಗೆ ಕೂಡ. ಅದೇನಿದ್ದರೂ ಅವರಿಗೆ ಬಿಟ್ಟಿದ್ದು. ಆ ದಿನಗಳಲ್ಲಿ ಕಡ್ಡಾಯವಾಗಿ ಅನುಭವಿಸುವ ಕಿರಿಕಿರಿ, ನೋವು, ಸಂಕಟ ಮುಖದಲ್ಲಿ ಎದ್ದು ಕಾಣುತ್ತಿರುತ್ತದೆ. ಇಂಥ ಶಾರೀರಿಕ ನೋವು ಇಲ್ಲದ ಮಹಿಳೆಯರದು ನಿಸ್ಸಂದೇಹವಾಗಿ ಭಾಗ್ಯ ಎನ್ನಬೇಕು. ನಮ್ಮ ದೇಶದಲ್ಲಿ ಇಂಥ ನ್ಯಾಪಿನ್‌ಗಳಿಗೆ 12.5% ಜಿಎಸ್‌ಟಿ ವಿಧಿಸಿದ ಕಾರಣ ಮತ್ತು ಅದು ನಿತ್ಯಾವಶ್ಯಕವಾಗಿದ್ದರಿಂದ ತುಟ್ಟಿದರವಾಯಿತು ಎಂಬ ದನಿಯೆದ್ದಿದೆ. ಅದು ಸಹಜ. ಸೂಕ್ತ ಪ್ರತಿಭಟನೆ. ಒಂದಾನೊಂದು ಕಾಲದಲ್ಲಿ ಬಾಲೆಯೊಬ್ಬಳು ತಾನು ಮುಟ್ಟಾಗಿದ್ದೇನೆ ಎಂದು ಅಮ್ಮನಿಗೆ ಹೇಳುವಾಗ ದನಿ ತಗ್ಗಿಸಿ, ಅಕ್ಕಪಕ್ಕ ಯಾರಿಲ್ಲವೆಂದು ಖಚಿತಪಡಿಸಿ ಪಿಸುಗುಟ್ಟುವ ದಿನಗಳು ಮುಗಿದಿದೆ. ಇಂದಿಗೆ ದನಿಯೆತ್ತಿ ಸ್ಯಾನಿಟರಿ ನ್ಯಾಪಿನ್‌ಗಳ ಬಗ್ಗೆ, ಬಳಕೆಯ ಬಗ್ಗೆ, ದುಬಾರಿಯಾಗುವ ಬೆಲೆಯ ಬಗ್ಗೆ ಸ್ತ್ರೀ ದನಿ ಎತ್ತುವ ಮುಕ್ತ ವಾತಾವರಣದಲ್ಲಿದ್ದೇವೆ. ಪ್ಯಾಡುಗಳು ಅದ್ಯಾವುದೇ ಇದ್ದರೂ, ಕಡ್ಡಾಯವಾಗಿ ಅನುಭವಿಸಲೇಬೇಕಾದ ನೋವು (ಕೆಳಹೊಟ್ಟೆಯ ನುಲಿತ, ಯಾತನೆ) ಇರದ ಸ್ತ್ರೀಯರೇ ಪುಣ್ಯವಂತೆಯರು. ಆದರೆ ಆ ತೊಂದರೆ ಇದ್ದ ಕನ್ಯೆಯರಿಗೆ (ಮಹಿಳೆಯರು ಸೇರಿ) ಅನುಭವಿಸಲೇಬೇಕು. ಯಾವುದೇ ಅಡ್ಡ ಪರಿಣಾಮಗಳಿಲ್ಲದ, ತಾತ್ಕಾಲಿಕವಲ್ಲದ ನಿವಾರಣೆ ಈ ಸೆಳೆತ, ನೋವಿಗೆ ಇದ್ದರೆ ಅದು ನಿಜವಾಗಿ ಹಕ್ಕಿಯ ಹಾಗೆ ಸ್ವತ್ಛಂದವಾಗಿ ಹಾರುವಂಥ ದಿನಗಳಾಗಬಲ್ಲುದು. – ಕೃಷ್ಣವೇಣಿ ಕಿದೂರು