ಹೇಳಿ ಕೇಳಿ ಇದು ಪ್ರಾಯ. ಸುಮ್ಮನೆ ಕುಳಿತಿದ್ದ ನನ್ನನ್ನು ಏತಕ್ಕಾಗಿ ಪರವಶಳಾಗುವಂತೆ ಮಾಡಿದೆಯೋ ಕಾಣೆ. ಹೃದಯಕ್ಕೆ ಹೆಜ್ಜೆ ಇಡಲು ಈವರೆಗೆ ಯಾರೊಬ್ಬರೂ ಅನುಮತಿ ನೀಡದ ನಾನು, ನಿನ್ನ ಆಗಮನವ ಸತ್ಕರಿಸಿದೆ. ಪ್ರೇಮವೆಂಬ ಪಲ್ಲಕ್ಕಿಯಲ್ಲಿ ನಾ ಮಗುವಾದೆ.
ಮುನಿಸಿನ ರಾಜ ನೀನು. ಈ ಪ್ರೀತಿಯ ಪಯಣದಲ್ಲಿ ಅದೆಷ್ಟೋ ಬಾರಿ ಕೋಪ-ಗಲಾಟೆ ಆಗಿದ್ದುಂಟು. ಮಾತು ಬಿಟ್ಟದ್ದೂ ಉಂಟು. ವಿರಹ ವೇದನೆಯ ಪರಿ ಹೇಳತೀರದು. ಈ ಹೃದಯದಲ್ಲಿ ನಿನಗೆ ಮತ್ತು ನಿನಗೆ ಮಾತ್ರ ಜಾಗವನ್ನು ಮೀಸಲಿಟ್ಟಿದ್ದೇನೆ. ಕೊನೆಯವರೆಗೂ ಅದರ ವಾರಸುದಾರ ನೀನೇ. ಪ್ರೇಮಕ್ಕೆ ಅನೇಕ ಬಗೆಯ ವ್ಯಾಖ್ಯಾನಗಳಿವೆ. ಆದರೆ, ನಮ್ಮ ಪ್ರೇಮ ಅದ್ಯಾವುದನ್ನೂ ಹೋಲುವಂತದಲ್ಲ.
ಅತ್ತಾಗ ಅಮ್ಮನಾಗಿ, ಕಾಳಜಿಗೆ ಅಣ್ಣನಾಗಿ, ಪ್ರೀತಿಗೆ ಅಪ್ಪನಾಗಿ , ತರಲೆಗೆ ತಮ್ಮನಾಗುತ್ತೀಯ ನೀನು. ಅಷ್ಟೇ ಏಕೆ? ಸಮಸ್ಯೆ ಬಂದಾಗ ಉತ್ತಮ ಗೆಳೆಯನಾಗುತ್ತೀಯಲ್ವಾ…ಇದೇ ಕಣೋ ಪ್ರೀತಿ. ಎಲ್ಲಾ ಸಂಬಂಧದ ಪ್ರೀತಿಯ ನಿಜಾರ್ಥ ನೀನು. ಕಾಮದ ಸುಳಿವಿಲ್ಲದ ಅದ್ಭುತ ಪ್ರೇಮ ನಮ್ಮದು.
ಅರಿವಿರದ ಮನದಲ್ಲಿ ಅರಳಿದ ಪ್ರೇಮ ಕುಸುಮ ನೀನು. ಅದೆಂದು ನಿನ್ನ ಪ್ರೀತಿಯ ಬಲೆಗೆ ಬಿದ್ದೆನೋ ನಾ ಕಾಣೆ. ಇಂದು ಸುಂದರ ಸಂಬಂಧದಲ್ಲಿ ಪ್ರತಿ ಪ್ರೀತಿಯ ಒಡತಿಯಾಗಿರುವೆ. ಕಷ್ಟದ ಸಮಯದಲ್ಲೂ ಜೊತೆಯಾಗಿದ್ದು ಪ್ರೀತಿಯ ನೆರಳಾಗಿರುವೆ. ಏಕೆಂದರೆ, ನೀನು ನನಗೆ ಪ್ರತಿದಿನ ಸ್ಫೂರ್ತಿ ನೀಡೋ ಉತ್ತಮ ಪುಸ್ತಕ ಆಗಬಲ್ಲೆ. ನಂಬಿಕೆಯ ಕಲ್ಪವೃಕ್ಷವೂ ಆಗಬಲ್ಲೆ. ಹೀಗಿರುವಾಗ, ಸಣ್ಣ ನೆಪ ಮಾಡಿ ನಿನ್ನನ್ನೂ ಏತಕ್ಕಾಗಿ ದೂರ ಮಾಡಲಿ? ಮುಂದಿನ ಜನ್ಮದಲ್ಲೂ ಸುಂದರ ಅರ್ಥವ ಹುಡುಕುವ ಪ್ರೇಮಿಗಳಾಗಿಯೇ ಹುಟ್ಟಿ ಬರೋಣ.
ಅರ್ಪಿತಾ ಕುಂಡೂರ್