ನಿರ್ಮಾಪಕ ಅಣಜಿ ನಾಗರಾಜ್ ಎಲ್ಲಿ ಹೋದರು ಎಂದು ಗಾಂಧಿನಗರದ ಮಂದಿ ಕೇಳುತ್ತಿರುವಾಗಲೇ ಅಣಜಿ ನಾಗರಾಜ್ ಪ್ರತ್ಯಕ್ಷರಾಗಿದ್ದಾರೆ. ಹಾಗಂತ ಈ ಬಾರಿ ಯಾವ ಹೀರೋಗೆ ಸಿನಿಮಾ ಮಾಡಿದ್ದಾರೆ ಎಂದು ನೀವು ಕೇಳುವಂತಿಲ್ಲ. ಈ ಬಾರಿ ಅವರು ಈ ದೇಶ ಕಂಡ ರಿಯಲ್ ಹೀರೋ ಒಬ್ಬರ ಜೀವನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಅದು ಭಾರತದ ರಾಷ್ಟ್ರಪತಿಯಾಗಿದ ದಿ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಕುರಿತಾಗಿ.
ಹೌದು, ಅಣಜಿ ನಾಗರಾಜ್ “ಮೈ ಹೀರೋ ಕಲಾಂ’ ಎಂಬ ಸಿನಿಮಾ ನಿರ್ಮಿಸಿದ್ದಾರೆ. ಶಿವು ಹಿರೇಮಠ ಈ ಸಿನಿಮಾದ ನಿರ್ದೇಶಕರು. ಈ ಚಿತ್ರದಲ್ಲಿ ಅಬ್ದುಲ್ ಕಲಾಂ ಅವರ ಬಾಲ್ಯ, ಶಿಕ್ಷಣ ಮುಂದೆ ಅವರು ವಿಜ್ಞಾನಿಯಾಗಿ ಬೆಳೆದ ರೀತಿ, ದೇಶಕ್ಕೆ ಅವರ ಕೊಡುಗೆ, ಯುವ ಜನರಿಗೆ ಅವರು ಪ್ರೇರಣೆಯಾದ ರೀತಿಯನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
ಅಬ್ದುಲ್ ಕಲಾಂ ಅವರ ಜೀವನ ಕುರಿತ ಪುಸ್ತಕ ಸೇರಿದಂತೆ ಇತರ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆಯಂತೆ. ಇದು ಯುವ ಜನತೆಗೆ ಪ್ರೇರಣೆಯಾಗುವಂತಹ ಚಿತ್ರವಾಗುತ್ತದೆ ಎಂಬ ನಂಬಿಕೆ ಅಣಜಿ ನಾಗರಾಜ್ ಅವರಿಗಿದೆ.
“ಅಬ್ದುಲ್ ಕಲಾಂ ಅವರ ಕಥೆ, ಯಾರಿಗಾದರೂ ಪ್ರೇರಣೆಯಾಗುವಂಥದ್ದು. ಅವರ ಬಾಲ್ಯ, ಓದು ಎಲ್ಲವೂ ಸ್ಫೂರ್ತಿದಾಯಕವಾಗಿದೆ. ಹಾಗಾಗಿ ಈ ಸಿನಿಮಾ ಮಾಡಿದ್ದೇನೆ. ಈ ಚಿತ್ರವನ್ನು ನಾನು ಅಬ್ದುಲ್ ಕಲಾಂ ಅವರಿಗೆ ಅರ್ಪಿಸುತ್ತಿದ್ದೇನೆ’ ಎನ್ನುತ್ತಾರೆ ಅಣಜಿ ನಾಗರಾಜ್. ಚಿತ್ರದಲ್ಲಿ ಚಿನ್ಮಯ್ ಹಾಗೂ ದೀಪಕ್ ಅಬ್ದುಲ್ ಕಲಾಂ ಅವರ ಬಾಲ್ಯದ ದಿನಗಳ ಪಾತ್ರ ಮಾಡಿದ್ದಾರೆ. ಉಳಿದಂತೆ ಅಬ್ದುಲ್ ಕಲಾಂ ಅವರ ವಿಶ್ಯುವಲ್ ಮೂಲಕ ಸಿನಿಮಾ ಕಟ್ಟಿಕೊಡಲಾಗಿದೆಯಂತೆ.
ಚಿತ್ರಕ್ಕೆ ಆನಂದ್ ಛಾಯಾಗ್ರಹಣ, ಪಳನಿ ಸೇನಾಪತಿ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಸಂಡೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಚಿತ್ರ ಸೆನ್ಸಾರ್‌ಗೆ ರೆಡಿಯಾಗಿದೆ.