ಆ ಇಂಪಾದ ಸಂಜೆ ಹೊತ್ತಲ್ಲಿ, ನಿನ್ನನ್ನೇ ನೆನೆಯುತ್ತಾ, ನೀ ಬರುವೆಯೆಂದು ಹೇಳಿದ ದಾರಿಯನ್ನೇ ಕಾಯುತ್ತಾ ಕುಳಿತಿದ್ದೆ. ನಿನ್ನ ಬೆಳದಿಂಗಳಂಥ ನಗುಮೊಗವನ್ನು ನೋಡಲು, ನನ್ನ ಕಣ್ಣುಗಳು ಕಾದು ಕುಳಿತಿದ್ದವು. ಮನಸಾರೆ ಇಷ್ಟಪಟ್ಟ ಹೃದಯವನ್ನು ಎಷ್ಟೋ ದಿನಗಳ ನಂತರ ನೋಡುವುದೆಂದರೆ ಅದೇನು ಕಡಿಮೆ ಖುಷಿಯಾ? ಹೃದಯ ಒಂದೇ ಸಮನೆ ನಿನ್ನ ಹೆಸರನ್ನು ಪಿಸುಗುಡುತ್ತಿತ್ತು. ಇಷ್ಟು ದಿನದ ಮಾತುಗಳನ್ನೆಲ್ಲಾ ಒಂದೇ ಸಾರಿ, ಹೇಳಿಬಿಡಬೇಕೆಂಬ ಆಸೆ ಹೆಚ್ಚುತ್ತಿತ್ತು.
ನೀ ನನ್ನೊಂದಿಗಿದ್ದರೆ ಮಾತ್ರ ದಿನದ ಕೆಲಸ ಆರಂಭ. ಪ್ರತಿ ದಿನ ಬೆಳಗ್ಗೆ ನಿನ್ನ ಮೆಸೇಜ್ ಬರದಿದ್ದರೆ, ಇಡೀ ದಿನ ಮೊಬೈಲ್ ಮೇಲೆ ಕೋಪಿಸಿಕೊಳ್ಳುತ್ತಿದ್ದೆ. ರಾತ್ರಿಯಂತೂ ನಿನಗೇ ಗೊತ್ತಲ್ಲ? ಎಂಥ ಕೊರೆವ ಚಳಿ, ಮಳೆಯಿದ್ದರೂ ನನಗೆ ಅದಾವುದರ ಅರಿವೆಯೇ ಇರುತ್ತಿರಲಿಲ್ಲ. ನಿನ್ನ ಮೆಸೇಜ್ ಓದದೆ, ನಿನ್ನೊಡನೆ ಮಾತಾಡದೆ ಕಣ್ಣಿಗೆ ನಿದ್ದೆ ಆವರಿಸಿದ್ದೇ ಇಲ್ಲ. ಮೊಬೈಲ್ ನನ್ನ ಜೊತೆಗಿದ್ದರೆ ನೀನೇ ಇರುವೆಯೆಂಬ ಭಾವನೆ ಜೊತೆಯಾಗ್ತಿತ್ತು ನನಗೆ.
ಆದರೆ, ಅಂದು ಮೊಬೈಲನ್ನು ದೂರ ಇಟ್ಟು, ಅರ್ಧ ಗಂಟೆ ಮೊದಲೇ ಬಂದು ನಿನ್ನ ದಾರಿಯನ್ನು ಕಾಯುತ್ತಾ ಕುಳಿತಿದ್ದೆ. ಮನಸ್ಸಿನಲ್ಲಿ ಲೆಕ್ಕವೇ ಇಲ್ಲದಷ್ಟು ಭಾವನೆಗಳು ಸುಳಿದಾಡುತ್ತಿದ್ದವು. ನನ್ನೀ ಪುಟ್ಟ ಹೃದಯದ ಮಹಾಗೋಪುರ ನೀನು. ಈ ಗೋಪುರದ ನಿರ್ಮಾಣಕ್ಕೆ ಅಂದು ಎರಡು ವರ್ಷ ತುಂಬಿದ ಸಂಭ್ರಮ. ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ.
ಒಂಟಿಯಾಗಿ ಕುಳಿತರೂ ಅದೇನೋ ಮಂಕು ಬಡಿದಂತೆ. ಅದೆಷ್ಟೇ ದೊಡ್ಡ ಧ್ವನಿಯಲ್ಲಿ ಯಾರೇ ಹೆಸರಿಡಿದು ಕೂಗಿದರೂ, ಅದು ನನ್ನ ತಾಕುವುದೇ ಇಲ್ಲ. ಕೆಲಸ ಮಾಡಲು ಹೊರಟರೆ ಕೆಲಸ ಸಾಗಲ್ಲ, ನಿದ್ದೆ ಮಾಡಲು ಹೊರಟರೆ ನಿದ್ದೆ ಬರಲ್ಲ. ನನ್ನೆದೆಯಲ್ಲಿ ಸದಾಕಾಲವೂ ನಿನ್ನದೇ ಕುಹೂ ಕುಹೂ. ನೀ ಬಂದ ಮೇಲೆ ಮನೆ, ಕುಟುಂಬ, ಬಂಧುಗಳನ್ನು ಮರೆತೇ ಬಿಟ್ಟಿರುವೆನೇನೋ!
ಹೀಗೆ ನಿನ್ನದೇ ಪ್ರಪಂಚದಲ್ಲಿ ಮುಳುಗಿ, ಮೈಮರೆತಿದ್ದ ನನಗೆ, ಅವತ್ತು ಅಷ್ಟು ಜೋರಾಗಿ ಬಂದ ಮಳೆಯ ಪರಿವೆಯೇ ಇರಲಿಲ್ಲ. ನೀನು ಬಂದು ಛತ್ರಿ ಹಿಡಿದು ಮೈ ಸ್ಪರ್ಶಿಸಿದಾಗಲೇ ಕನಸಿನ ಲೋಕದಿಂದ ಹೊರಬಂದದ್ದು. “ಹೀಗೆ ಮಳೆಯಲ್ಲಿ ನೆನೆದರೆ ಶೀತ ಆಗಲ್ವಾ? ಛತ್ರಿ ಇಲ್ವಾ ನಿನ್ನ ಹತ್ರ?’ ಅಂತ ಪ್ರೀತಿಯಿಂದಲೇ ಕೇಳಿದೆಯಲ್ವಾ, ಅದಕ್ಕೆ ಉತ್ತರವಾಗಿಯೇ ಈ ಪತ್ರ. ಈಗಲಾದರೂ ತಿಳೀತಾ, ಅವತ್ತು ನಾನ್ಯಾಕೆ ಮಳೆಯಲ್ಲೆ ನೆನೆದೆ ಎಂದು? ನೀನು ನೂರು ಮಾತಾಡಿದರೂ, ನನಗವತ್ತು ಒಂದು ಮಾತಾಡೋಕೂ ಆಗಲಿಲ್ಲ. ಅದಕ್ಕೇ ಈ ಪತ್ರ ಬರೆದಿದ್ದೇನೆ. ಓದಿಕೋ…
ಇಂತಿ ನಿನ್ನವಳು…
ಗೀತಾ ಕೆ. ಬೈಲಕೊಪ್ಪ