ದುಬೈ: ಹಲವು ಸಮಯದಿಂದ ಬ್ಯಾಡ್ ಪ್ಯಾಚ್ ನಲ್ಲಿದ್ದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಫಾರ್ಮ್ ಗೆ ಮರಳಿದ್ದಾರೆ. ಅಫ್ಘಾನಿಸ್ಥಾನ ವಿರುದ್ಧ ಗುರುವಾರ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ, ತನ್ನ ಬ್ಯಾಟಿಂಗ್ ಖದರ್ ಏನೆಂಬುದನ್ನು ಪ್ರಚಂಡ ರೀತಿಯಲ್ಲಿ ಸಾಧಿಸಿದ್ದಾರೆ.
2019ರ ನವೆಂಬರ್ ಬಳಿಕ ಮೊದಲ ಬಾರಿಗೆ ಶತಕ ಬಾರಿಸಿದ ವಿರಾಟ್, ಮೈದಾನದಲ್ಲಿ ದೊಡ್ಡ ನಗುವೊಂದನ್ನು ಚೆಲ್ಲಿ ನಿರಾಳರಾದರು. ಕೇವಲ 61 ಎಸೆತಗಳಲ್ಲಿ 122 ರನ್ ಬಾರಿಸಿದರು. ಈ ಏಷ್ಯಾಕಪ್ ನಲ್ಲಿ 296 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಅವರು, “ನಾನು 60-65 ರನ್ ಗಳನ್ನು ಬಾರಿಸಿದರೂ ವೈಫಲ್ಯಗಳೆಂದು ಬಿಂಬಿಸಲಾಗುತ್ತಿತ್ತು. ಇದು ನನಗೆ ಆಶ್ಚರ್ಯ ಉಂಟು ಮಾಡಿದ್ದವು, ಆಘಾತಕಾರಿಯಾಗಿತ್ತು. ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೆ, ತಂಡಕ್ಕೆ ಕೊಡುಗೆ ನೀಡುತ್ತಿದ್ದೆ. ಆದರೆ ಫಾರ್ಮ್ ನಲ್ಲಿಲ್ಲ ಎಂಬಂತೆ ತೋರಿಸಲಾಗುತ್ತಿತ್ತು” ಎಂದು ಹೇಳಿದರು.
“ಆದರೆ ನಾನು ಹೇಳಿದಂತೆ, ದೇವರು ನನಗೆ ಈ ಹಿಂದೆ ಬಹಳಷ್ಟು ಒಳ್ಳೆಯ ಸಮಯವನ್ನು ಆಶೀರ್ವದಿಸಿದ್ದಾನೆ ಮತ್ತು ಅದಕ್ಕಾಗಿಯೇ ಈ ವಿಷಯಗಳನ್ನು ಮಾತನಾಡಬಹುದಾದ ಈ ಸ್ಥಾನದಲ್ಲಿ ನಾನು ಇದ್ದೇನೆ. ದೇವರು ನಮ್ಮೆಲ್ಲರನ್ನು ಆಶೀರ್ವದಿಸುತ್ತಾನೆ ಎಂದು ಒಪ್ಪಿಕೊಳ್ಳಲು ನನಗೆ ಯಾವುದೇ ನಾಚಿಕೆ ಇಲ್ಲ. ನಮ್ಮ ಹಣೆಬರಹದಲ್ಲಿ ಎಲ್ಲವೂ ಇದ್ದು, ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ” ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ:ರಣಬೀರ್ ‘ಬ್ರಹ್ಮಾಸ್ತ್ರ’ ರಿವೀವ್: ವಿಎಫ್ ಎಕ್ಸ್ ಹೆಸರಲ್ಲಿ ‘ಲೇಸರ್ ಶೋ’ ಎಂದ ಜನ
“ನಾನು ವಿರಾಮದಿಂದ ಫ್ರೆಶ್ ಆಗಿ ಮರಳಿದೆ, ಉತ್ಸುಕತೆಯಿಂದ ಹಿಂತಿರುಗಿದೆ. ಈ ಸಮಯದಲ್ಲಿ ತಂಡದ ಆಡಳಿತವು ನನ್ನನ್ನು ಉತ್ತಮವಾಗಿ ನೋಡಿಕೊಂಡಿತು. ಹೆಚ್ಚಿನದೇನು ಹೇಳಿರಲಿಲ್ಲ. ನೀವು ಬ್ಯಾಟಿಂಗ್ ಮಾಡಿ, ನಿಮ್ಮ ಬ್ಯಾಟಿಂಗನ್ನು ಆನಂದಿಸಿ ಎಂದಿದ್ದರು” ಎಂದು ವಿರಾಟ್ ಹೇಳಿದರು.
“ನನಗೆ ಅನೇಕ ಸಲಹೆಗಳು ಬಂದಿದ್ದವು. ಜನರು ನಾನು ಈ ತಪ್ಪು ಮಾಡುತ್ತಿದ್ದೇನೆ, ಆ ತಪ್ಪು ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ಆದರೆ ನನ್ನ ತಲೆಯೊಳಗೆ ಏನು ನಡೆಯುತ್ತಿದೆ ಎಂಬುದನ್ನು ನಾನು ಯಾರಿಗೂ ವಿವರಿಸಲು ಸಾಧ್ಯವಾಗಲಿಲ್ಲ” ಎಂದು ಕೊಹ್ಲಿ ಹೇಳಿದರು.