ಬೆಂಗಳೂರು: ಉದ್ಯಮಿ ಶ್ರೀನಿವಾಸ ನಾಯ್ಡು ಮತ್ತು ಆತನ ಸಹಚರರು ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಹಲ್ಲೆ ನಡೆಸಿರುವ ಘಟನೆ ಲ್ಯಾವೆಲ್ಲಿ ರಸ್ತೆಯಲ್ಲಿರುವ ಕಾಝಿ ಹೋಟೆಲ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಈ ಸಂಬಂಧ ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್ ಎಂಬುವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಶ್ರೀನಿವಾಸ ನಾಯ್ಡು ಮತ್ತು ಆತನ ಕಾರು ಚಾಲಕ ಸೇರಿದಂತೆ ಮತ್ತಿತರರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಶುಕ್ರವಾರ ರಾತ್ರಿ ಲ್ಯಾವೆಲ್ಲಿ ರಸ್ತೆಯಲ್ಲಿರುವ ಕಾಝಿ ಹೋಟೆಲ್‌ಗೆ ರಿಕ್ಕಿ ರೈ ಬಂದಿದ್ದು, ಅದೇ ವೇಳೆ ಉದ್ಯಮಿ ಶ್ರೀನಿವಾಸ ನಾಯ್ಡು ಕೂಡ ಬಂದಿದ್ದಾರೆ. ಏಕಾಏಕಿ ಶ್ರೀನಿವಾಸನಾಯ್ಡು, ಆತನ ಕಾರು ಚಾಲಕ ಹಾಗೂ ಇತರರು ರಿಕ್ಕಿ ರೈ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ರಿಕ್ಕಿ ರೈ ಹಣೆ ಭಾಗಕ್ಕೆ ಪೆಟ್ಟು ಬಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮತ್ತೂಂದೆಡೆ ಉದ್ಯಮಿ ಶ್ರೀನಿವಾಸನಾಯ್ಡು ಘಟನೆ ಸಂಬಂಧ ಯಾವುದೇ ದೂರು ನೀಡಿಲ್ಲ. ರಿಕ್ಕಿ ರೈ ಚಾಲಕ ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು. ಹಳೇ ದ್ವೇಷ ಕಾರಣ: 2021ರ ಅಕ್ಟೋಬರ್‌ನಲ್ಲಿ ಸದಾಶಿವನಗರದ ಸಪ್ತಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಶ್ರೀನಿವಾಸ್ ನಾಯ್ಡುಗೆ ಸೇರಿದ ರೇಂಜ್ ರೋವರ್ ಕಾರಿಗೆ ಬೆಂಕಿಯಿಟ್ಟ ಆರೋಪ ರಿಕ್ಕಿ ರೈ ಹಾಗೂ ಆತನ ಬೆಂಬಲಿಗರ ಮೇಲಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಠಾಣಾ ಪೊಲೀಸರು 10 ಜನ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳು ರಿಕ್ಕಿ ರೈ ಸೂಚನೆ ಅನ್ವಯ ಕಾರನ್ನು ಸುಟ್ಟಿರುವುದಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು.
ಇನ್ನು ಶ್ರೀನಿವಾಸನಾಯ್ಡು ಮತ್ತು ರಿಕ್ಕಿ ರೈ ಸ್ನೇಹಿತರಾಗಿದ್ದರು. ಮುತ್ತಪ್ಪ ರೈ ಜತೆಯೂ ಶ್ರೀನಿವಾಸನಾಯ್ಡು ವ್ಯವಹಾರ ಇಟ್ಟುಕೊಂಡಿದ್ದರು. ಮುತ್ತಪ್ಪ ರೈ ಮೃತಪಟ್ಟ ಬಳಿಕ ಈ ಗ್ರೂಪ್‌ನಿಂದ ದೂರವಾಗಿದ್ದರು. ರಿಕ್ಕಿ ರೈ ಮತ್ತು ಶ್ರೀನಿವಾಸ ನಾಯ್ಡು ನಡುವೆ ಲಕ್ಷಾಂತರ ರೂ. ಹಣಕಾಸಿನ ವಿಚಾರಕ್ಕೆ ಮೊದಲಿ ನಿಂದಲೂ ಗಲಾಟೆ ನಡೆಯುತ್ತಿತ್ತು.
ಶುಕ್ರವಾರ ಅನಿರೀಕ್ಷಿತವಾಗಿ ಹೋಟೆಲ್ ಗೆ ಹೋದಾಗ, ಶ್ರೀನಿವಾಸ ನಾಯ್ಡು ಮತ್ತು ರಿಕ್ಕಿ ರೈ ಮುಖಾಮುಖೀ ಆಗಿದ್ದಾರೆ. ಆಗ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.