ಕುಟುಂಬದ ಯಾರಾದರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರೆ, ಅವರ ನಂತರವರಿಗೂ ಆ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿ, ಸಿನಿಮಾಕ್ಕೆ ಬರುತ್ತಾರೆ. ಈಗಾಗಲೇ ಅನೇಕ ಮಂದಿ ಹಿರಿಯ ನೆನಪು ಹಾಗೂ ಅವರ ಕೆಲಸಗಳನ್ನು ಸ್ಮರಿಸುತ್ತಾ ಚಿತ್ರರಂಗಕ್ಕೆ ಬಂದಿದ್ದಾರೆ. ಈಗ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರ ಪೈಕಿ ಎಲ್. ವೈದ್ಯನಾಥನ್ ಅವರ ಮಗನ ಸರದಿ.
“ಹೇಮಾವತಿ’, “ಏಳು ಸುತ್ತಿನ ಕೋಟಿ’, “ಅಪರಿಚಿತ’, “ಅನುಭವ’, “ಒಂದು ಮುತ್ತಿನ ಕಥೆ’ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದವರು ಎಲ್. ವೈದ್ಯನಾಥನ್. ಈಗ ಮಗ ಎಲ್.ವಿ. ಮುತ್ತುಕುಮಾರಸ್ವಾಮಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಹೌದು, ಎಲ್. ವೈದ್ಯನಾಥನ್ ಅವರ ಮಗ ಎಲ್.ವಿ. ಮುತ್ತುಕುಮಾರಸ್ವಾಮಿ ಈಗ “ಅರಣ್ಯಾನಿ’ ಎಂಬ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಒಂದು ತಮಿಳು ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಮುತ್ತುಗೆ ಇದು ಎರಡನೆಯ ಚಿತ್ರ ಮತ್ತು ಮೊದಲ ಕನ್ನಡ ಚಿತ್ರ. “ಇವತ್ತು ನಮ್ಮ ತಂದೆಯ ಆಶೀರ್ವಾದದೊಂದಿಗೆ ನಾನು ಇಲ್ಲಿಗೆ ಬಂದಿದ್ದೇನೆ. ಕನ್ನಡದಲ್ಲಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದವರು ಅವರು. ನಾನು ಆರನೇ ಕ್ಲಾಸಿನಲ್ಲಿದ್ದಾಗಲೇ ತಂದೆಯವರೊಂದಿಗೆ ಕೆಲಸ ಮಾಡುತ್ತಿದ್ದೆ. ಓದಿದ್ದು ಬೇರೆಯಾದರೂ, ಸಂಗೀತ ಕ್ಷೇತ್ರದಲ್ಲಿ ತೊಡಿಗಿಸಿಕೊಳ್ಳಬೇಕು ಎಂಬುದು ನನ್ನ ಬಹಳ ದಿನಗಳ ಕನಸಾಗಿತ್ತು’ ಎನ್ನುತ್ತಾರೆ ಮುತ್ತುಕುಮಾರಸ್ವಾಮಿ.
ಮೆಲೋಡಿಗಳಿಗೆ ಯಾವತ್ತೂ ಸಾವಿಲ್ಲ ಎನ್ನುವ ಮುತ್ತು, ಮೆಲೋಡಿಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರಂತೆ. ಅಷ್ಟೇ ಅಲ್ಲ, ಇತ್ತೀಚೆಗೆ ಬಹಳ ಕಡಿಮೆಯಾಗುತ್ತಿರುವ ಲೈವ್ ಸಂಗೀತಕ್ಕೂ ಮೊದಲು ಪ್ರಾಶಸ್ತ್ಯ ಕೊಡುತ್ತಾರಂತೆ. “ಅರಣ್ಯಾನಿ’ ಚಿತ್ರಕ್ಕೂ ಅವರು ಮೆಲೋಡಿ ಹಾಡುಗಳನ್ನು ಕೊಡುವುದರ ಜೊತೆಗೆ ಲೈವ್ ಆರ್ಕೆಸ್ಟ್ರಾ ಸಹ ಬಳಸಿಕೊಂಡಿದ್ದಾರಂತೆ.
* ರವಿ ರೈ