Advertisement

ದೇಹಕ್ಕೆ ತಂಪು ನೀಡುವ ಸಾಸಿವೆ

06:41 AM Aug 08, 2017 | |

ವಿವಿಧ ಹಣ್ಣುಗಳು, ತರಕಾರಿಗಳು, ಮೊಸರು, ತೆಂಗಿನತುರಿ ಇತ್ಯಾದಿಗಳನ್ನು ಬಳಸಿ ತಯಾರಿಸುವ ಸಾಸಿವೆಗಳು ಬಿಸಿಲಿನ ಬೇಗೆಗೆ ಬಸವಳಿದ ದೇಹಕ್ಕೆ ತಂಪು ನೀಡಿ ಹೊಸ ಚೈತನ್ಯವನ್ನು ನೀಡಬಲ್ಲದು. ಇಲ್ಲಿವೆ ಕೆಲವು ರಿಸಿಪಿಗಳು. ಸವಿದು ಬೇಸಿಗೆಯನ್ನು ಹಿತವಾಗಿಸಿಕೊಳ್ಳಿ.

Advertisement

ಹಾಗಲಕಾಯಿ ಸಾಸಿವೆ
ಬೇಕಾಗುವ ಸಾಮಗ್ರಿ:

ಸಣ್ಣಗೆ ಹೆಚ್ಚಿದ ಹಾಗಲಕಾಯಿ- ಅರ್ಧ ಕಪ್‌, ತೆಂಗಿನತುರಿ- ಒಂದು ಕಪ್‌, ಸಾಸಿವೆ- ಎರಡು ಚಮಚ, ಹಸಿಮೆಣಸು- ಒಂದು, ಮೊಸರು- ಒಂದು ಕಪ್‌.

ತಯಾರಿಸುವ ವಿಧಾನ:
ದಪ್ಪ ತಳದ ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಬಿಸಿಯಾದ ಕೂಡಲೇ ಸಣ್ಣಗೆ ಹೆಚ್ಚಿದ ಹಾಗಲಕಾಯಿಯನ್ನು ಸ್ವಲ್ಪ ಉಪ್ಪು ಬೆರೆಸಿ ಇದಕ್ಕೆ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ತೆಂಗಿನತುರಿಗೆ ಉಪ್ಪು, ಹಸಿಮೆಣಸು, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ಇದಕ್ಕೆ ಆರಿದ ಹಾಗಲಕಾಯಿ ಹೋಳುಗಳು, ಮೊಸರು ಮತ್ತು ಬೇಕಷ್ಟು ನೀರು ಸೇರಿಸಿ ಸಾಸಿವೆಯ ಹದ ಮಾಡಿಕೊಳ್ಳಿ. ಈಗ ತಯಾರಾದ ಸಾಸಿವೆಗೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.

ಕಾಡುಮಾವಿನ ಹಣ್ಣಿನ ಸಾಸಿವೆ 
ಬೇಕಾಗುವ ಸಾಮಗ್ರಿ:

ಮಾವಿನ ಹಣ್ಣು- ಎಂಟು, ತೆಂಗಿನತುರಿ- ಒಂದು ಕಪ್‌, ಸಾಸಿವೆ- ಒಂದೂವರೆ ಚಮಚ,  ಬೆಲ್ಲದ ಪುಡಿ- ಎಂಟು ಚಮಚ, ಕೆಂಪುಮೆಣಸು- ಒಂದು, ಉಪ್ಪು ರುಚಿಗೆ.

ತಯಾರಿಸುವ ವಿಧಾನ:
ಸಿಪ್ಪೆ ತೆಗೆದ ಮಾವಿನ ಹಣ್ಣಿಗೆ ಬೆಲ್ಲ ಹಾಗೂ ಉಪ್ಪು ಬೆರೆಸಿಡಿ. ತೆಂಗಿನತುರಿಗೆ ಉಪ್ಪು, ಸಾಸಿವೆ, ಕೆಂಪುಮೆಣಸು ಸೇರಿಸಿ ನಯವಾಗಿ ರುಬ್ಬಿ ಮಾವಿನಹಣ್ಣಿಗೆ ಸೇರಿಸಿ. ನಂತರ ಇದಕ್ಕೆ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ಈಗ ಬಹಳ ರುಚಿಯಾದ ಕಾಡುಮಾವಿನ ಹಣ್ಣಿನ ಸಾಸಿವೆ ಸರ್ವ್‌ ಮಾಡಲು ಸಿದ್ಧ.

Advertisement

ಸೇಬು ವಿದ್‌ ದಾಳಿಂಬೆಯ ಸಾಸಿವೆ
ಬೇಕಾಗುವ ಸಾಮಗ್ರಿ:

ಹೆಚ್ಚಿದ ಸೇಬು- ಒಂದು ಕಪ್‌, ದಾಳಿಂಬೆ- ಅರ್ಧ ಕಪ್‌, ಹೆಚ್ಚಿದ ಸೌತೆಕಾಯಿ- ಅರ್ಧ ಕಪ್‌, ಹೆಚ್ಚಿದ ದ್ರಾಕ್ಷಿ- ಅರ್ಧ ಕಪ್‌, ಮೊಸರು- ಒಂದು ಕಪ್‌, ಬೆಲ್ಲ- ಒಂದು ಚಮಚ, ತೆಂಗಿನ ತುರಿ- ಒಂದು ಕಪ್‌, ಸಾಸಿವೆ- ಒಂದು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ:
ಮಿಕ್ಸಿಂಗ್‌ ಬೌಲ್‌ಗೆ ಹೆಚ್ಚಿದ ಸೇಬು, ದಾಳಿಂಬೆ, ಸೌತೆಕಾಯಿ, ದ್ರಾಕ್ಷಿಗಳನ್ನು ಹಾಕಿ ಸ್ವಲ್ಪ ಉಪ್ಪು, ಬೆಲ್ಲ ಬೆರೆಸಿ ಮಿಶ್ರಮಾಡಿ. ಇದಕ್ಕೆ, ತೆಂಗಿನತುರಿ, ಸಾಸಿವೆ, ಹಸಿಮೆಣಸು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಸೇರಿಸಿ. ನಂತರ, ಮೊಸರು, ಉಪ್ಪು ಹಾಗೂ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ.

ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next