ಬೆಂಗಳೂರು: ರೈಲ್ವೆ ಇ-ಟಿಕೆಟ್ ವಂಚನೆ ಹಾಗೂ ಸೈಬರ್ ಉಗ್ರ ಗುಲಾಮ ಮುಸ್ತಫಾನನ್ನು ಶನಿವಾರ ರಾಜಗೋಪಾಲನಗರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಳಗ್ಗೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಆರೋಪಿ ರಾಜಗೋಪಾಲನಗರದಲ್ಲಿ ವಾಸವಾಗಿದ್ದು ಇಲ್ಲಿಯೇ ಕುಳಿತು ಅಕ್ರಮ ದಂಧೆ ನಡೆಸುತ್ತಿದ್ದ ಎಂಬ ಆರೋಪದ ಮೇಲೆ ಆರ್‌ಪಿಎಫ್ನ ಹಿರಿಯ ಅಧಿಕಾರಿಗಳು ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ಜ.23ರಂದು ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಿ ಹತ್ತು ದಿನಗಳ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ಇದೀಗ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಸೋಮವಾರ ಸಿಸಿಬಿ ವಶಕ್ಕೆ: ಕೇಂದ್ರ ಅಪರಾಧ ವಿಭಾಗಕ್ಕೆ ಪ್ರಕರಣ ವರ್ಗಾವಣೆಯಾಗಿರುವುದರಿಂದ ಸೋಮವಾರ ಸಿಸಿಬಿ ಅಧಿಕಾರಿಗಳು ಆರೋಪಿ ಮುಸ್ತಫಾನನ್ನು ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಮುಸ್ತಫಾ ರೈಲ್ವೆ ಇಲಾಖೆ ಸಾಫ್ಟ್ವೇರ್ ಮತ್ತು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿಕೊಂಡು ಅಕ್ರಮ ದಂಧೆ ನಡೆಸುತ್ತಿದಲ್ಲದೆ,
ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಇಂಡೋನೇಷ್ಯಾದ ಶಂಕಿತರ ಜತೆ ಸಂಪರ್ಕ ಹೊಂದಿದ್ದ. ಜತೆಗೆ ಉಗ್ರ ಸಂಘಟನೆಗಳಿಗೆ ಡಿಜಿಟಲ್ ಕರೆನ್ಸಿ ಮೂಲಕ ಆರ್ಥಿಕ ಸಹಾಯ ಮಾಡಿದ್ದಾನೆಂಬ ಆರೋಪದ ಮೇಲೆ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.