Advertisement
ನಾನು ಸಣ್ಣವನಿರುವಾಗ ನನ್ನಜ್ಜ ನನಗೆ ತುಂಬಾ ಕತೆಗಳನ್ನು ಹೇಳುತ್ತಿದ್ದರು. ಅದು ಪುರಾಣ ಕತೆಗಳು. ಪ್ರತಿನಿತ್ಯ ಕಥೆ ಕೇಳಿಯೇ ಮಲಗುವುದು ಅಭ್ಯಾಸವಾಗಿ ಹೋಗಿತ್ತು. ಕತೆ ಕೇಳಿಯಾದ ಮೇಲೆ ಏನೆಲ್ಲಾ ಕಲ್ಪನೆಗಳು ಹುಟ್ಟಿಕೊಳ್ಳುತ್ತಿದ್ದವು. ಏನೋ ಖುಷಿ ಸಿಗುತ್ತಿತ್ತು. ಮತ್ತೆ ಶಾಲೆಗೆ ಸೇರಿದ ಮೇಲೆ ಅಕ್ಷರ ಓದಲಿಕ್ಕೆ, ಬರಿಯಲಿಕ್ಕೆ ಬಂದ ಮೇಲೆ, ಮನೆಗೆ ತರುತ್ತಿದ್ದ ಗಿಳಿವಿಂಡು, ಚಿತ್ರಕತೆಗಳ ಮೇಲೆ ಕಣ್ಣಾಡಿಸಿಕೊಂಡು ಯಾವುದೋ ಕಲ್ಪನೆಯಲ್ಲಿ ಇರುತ್ತಿದ್ದೆ. ಮನೆಗೆ ಬರುತ್ತಿದ್ದ ಬಾಲಮಂಗಳ ಪತ್ರಿಕೆಯಲ್ಲಿ ಮಕ್ಕಳ ಬಣ್ಣ ಬಣ್ಣದ ಫೋಟೋಗಳು ಬರುತ್ತಿದ್ದವು. ನಾನೂ ಒಮ್ಮೆ ಅದನ್ನು ನೋಡಿ ಅಮ್ಮನೊಂದಿಗೆ ಒತ್ತಾಯ ಮಾಡಿ ನನ್ನ ಭಾವಚಿತ್ರ ಕಳಿಸಿ, ಅದರ ಕೆಳಗೆ ನನಗೆ ಸೈನಿಕನಾಗುವ ಆಸೆ ಉಂಟು ಅಂತ ಬರೆದೆ. ನನ್ನ ಭಾವಚಿತ್ರ ಬಾಲಮಂಗಲದಲ್ಲಿ ಪ್ರಕಟವಾದ ಮೇಲೆ ನನಗೆ ತುಂಬ ಖುಷಿ ಆಯಿತು. ಆಮೇಲೆ ಜಾಸ್ತಿ ಪುಸ್ತಕದ ಮೇಲೆ ಕಣ್ಣಾಡಿಸಲು ಶುರು ಮಾಡಿದೆ.
Related Articles
Advertisement
ಅಂದರೆ, ಶಾಲೆಯಲ್ಲಿ, ನೆರೆಹೊರೆಯವರು, ಸುತ್ತಮುತ್ತಲಿನವರು ಪ್ರೋತ್ಸಾಹ ಕೊಟ್ಟರೆ ನಮಗೆ ಬರೆಯಬೇಕು ಅಂತ ಆಸೆ ಹುಟ್ಟುತ್ತದೆ. ಆದರೆ ಕೆಲವೊಮ್ಮೆ, ಕೆಲವರು ನಾವು ಬರೆದ್ದದ್ದನ್ನು ಓದಿ “ನಿಂಗೆ ಅಮ್ಮ ಬರೆದುಕೊಟ್ಟಲ್ಲಾ’ ಎಂದು ಕೇಳ್ತಾರೆ. ಆಗ ಬೇಸರ ಆಗುತ್ತದೆ. ಅಮ್ಮ ನಾನು ಬರೆದದ್ದನ್ನು ತಿದ್ದುತ್ತಾರೆ. “ತಿದ್ದದಿದ್ದರೆ ಬರವಣಿಗೆ ಆಗೋದಿಲ್ಲ’ ಅಂತ ಹೇಳ್ತಾರೆ. ಹಾಗಾಗಿ ನಾವು ಬರೆದದ್ದನ್ನು ತಾಳ್ಮೆಯಿಂದ ಓದಿ ತಿದ್ದುವ ಮಾರ್ಗದರ್ಶಕರು ಬೇಕು.
ಈಗ ಮೊಬೈಲು, ಟಿ. ವಿ. ನೋಡೋದು ಹೆಚ್ಚಾಗಿ ಓದ-ಬರಹ ಕಡಿಮೆಯಾಗಿದೆ.ಅದರಿಂದ ಪೂರ್ತಿಯಾಗಿ ಹೊರಬರುವುದು ಹೇಗೆ ಅಂತ ಗೊತ್ತಿಲ್ಲ. ಹಾಗಾಗಿ, ಮನೆಯಲ್ಲಿ ದೊಡ್ಡವರೂ ಕೂಡ ಅದನ್ನು ಉಪಯೋಗ ಮಾಡುವುದು ಕಡಿಮೆ ಮಾಡಬೇಕು.
ಆದುದರಿಂದ, ನಾನು ಏನು ಹೇಳ್ಳೋಕೆ ಇಷ್ಟ ಪಡುತ್ತೀನಿ ಅಂದರೆ, ಮನೆಯಲ್ಲಿ ಎಲ್ಲರಿಗೂ ಓದುವ ಅಭ್ಯಾಸ ಇರಬೇಕು. ಇಲ್ಲದಿದ್ದರೆ, ಮಕ್ಕಳಿಗೆ ಬರೀ ಪಾಠಪುಸ್ತಕ ಮಾತ್ರ ಓದಿ ಅಂತ ಬೈಯಬಾರದು. ಮಕ್ಕಳು ಬರೆದರೆ ಹುರಿದುಂಬಿಸಬೇಕು. ಆಗ ನಮಗೆ ಬರೆಯೋದಕ್ಕೆ, ಹೊಸತನ್ನು ತಿಳಿದುಕೊಳ್ಳೋದಿಕ್ಕೆ ಐಡಿಯಾ ಬರುತ್ತದೆ. ಏನಾದರೂ ಗೀಚಿದ್ರೆ ಬರೇ “ಓದು ಓದು’ ಅಂತ ಗದರಿದರೆ ಬರೆಯೋಕೆ ಸಾಧ್ಯ ಇಲ್ಲ.
ಶಾಲೆಯಲ್ಲಿ ಅಧ್ಯಾಪಕರು ಕೂಡ ಓದೋದಿಕ್ಕೆ ಲೈಬ್ರರಿಗೆ ಕಳಿಸಬೇಕು. “ಏನಾದರೂ ಬರೆದು ತನ್ನಿ’ ಅಂತ ಹುರಿದುಂಬಿಸಬೇಕು. ಆಗ ನಾವೆಲ್ಲಾ ಏನೋ ಅನ್ನಿಸಿದ್ದನ್ನ ಉದ್ದಕ್ಕೆ ಬರೆದುಕೊಂಡು ಹೋಗುತ್ತೇವೆ. ಆಗ ನಮಗೆ ಬರೆಯೋಕೆ ಸಾಧ್ಯ ಆಗ್ತದೆ. ಕಳೆದ ವರುಷ ಗೆಳೆಯರು ಒಂದಷ್ಟು ಜನ ಸೇರಿಕೊಂಡು ಬಿಡುವಿನ ವೇಳೆಯಲ್ಲಿ ಆ ದಿನದ ಘಟನೆಯನ್ನು ಹಾಳೆಯ ಮೇಲೆ ಪತ್ರಿಕೆಯ ಹಾಗೆ ರಚಿಸುತ್ತಿದ್ದೆವು. ಈಗ ಅದು ನಿಂತು ಹೋಗಿದೆ. ನನ್ನ ಕವಿತೆ ಪತ್ರಿಕೆಯಲ್ಲಿ ನೋಡಿ ನನ್ನ ಗೆಳೆಯರು ಕೂಡ ಬರೆಯಲು ಶುರು ಮಾಡಿದ್ದಾರೆ.
ನನ್ನ ಕವಿತೆಗಳು ಪತ್ರಿಕೆಯಲ್ಲಿ ಬಂದಾಗ ಎಲ್ಲರೂ ಓದಿ ಗುರುತಿಸಿ ಮಾತನಾಡಿಸುತ್ತಾರೆ. ಆಗ ಖುಷಿ ಆಗ್ತದೆ. ಇನ್ನೂ ಬರೀಬೇಕು ಅನ್ನುವ ಮನಸ್ಸು ಬರ್ತದೆ. ನಮ್ಮನ್ನು ಹೀಗೆ ಗುರುತಿಸುವವರು ಸಿಕ್ಕರೆ ಒಳ್ಳೆಯದು. ಓದು-ಬರಹ ಒಂದು ಉತ್ತಮ ಕಲೆ.ಇದರಿಂದ ಸಿಗುವ ಖುಷಿ ಸುಂದರವಾದದ್ದು. ಮಕ್ಕಳಿಗೆ ತಿಂಡಿ, ಉಡುಪು ತಂದು ಕೊಟ್ಟಂತೆ ಪುಸ್ತಕ ತಂದು ಕೊಡುವುದು ಒಳ್ಳೆಯದು. ಮಕ್ಕಳನ್ನು ಜಾತ್ರೆಗಳಿಗೆ, ಸಮಾರಂಭಗಳಿಗೆ ಕರೆದುಕೊಂಡು ಹೋಗುವಷ್ಟೇ ಖುಷಿಯಲ್ಲಿ ಸಾಹಿತ್ಯ ಸಮ್ಮೇಳನಗಳಿಗೆ ಕರೆದುಕೊಂಡು ಹೋಗಬೇಕು. ಆಗ ತನ್ನಿಂತಾನೆ ಮಕ್ಕಳಿಗೆ ಸಾಹಿತ್ಯ ಇಷ್ಟ ಆಗುತ್ತದೆ. ಇನ್ನು ಸಾಹಿತ್ಯ ಸಮ್ಮೇಳನಗಳಲ್ಲಿ ಹೀಗೆ ಮಕ್ಕಳ ಗೋಷ್ಠಿಯನ್ನು ಇಡಬೇಕು. ಆಗ ಖಂಡಿತವಾಗಿಯೂ ಮಕ್ಕಳು ಬರುತ್ತಾರೆ. ಆಸಕ್ತಿ ಬೆಳೆಸಿಕೊಳ್ಳುತ್ತಾರೆ.
ನನಗೆ ಇವೆಲ್ಲಾ ಸಿಕ್ಕಿ , ಸಾಹಿತ್ಯಕ್ಕೆ ಪೂರಕವಾದ ವಾತಾವರಣ ಸಿಕ್ಕ ಕಾರಣ ನಾನು ಬರಿಯೋದಿಕ್ಕೆ ಸಾಧ್ಯ ಆಯಿತು. ಹಾಗಾಗಿ ಇಂತಹ ವಾತಾವರಣ ಎಲ್ಲರಿಗೂ ಸಿಕ್ಕರೆ ಒಳ್ಳೆಯದು. ಇಂತಹ ವಾತಾವರಣ ಎಲ್ಲರಿಗೂ ಸಿಗಲೆಂಬ ಆಶಯ ನನ್ನದು.
– ಆಶಯ ಕೆ. ಎ.