Advertisement

ಬಿಜೆಪಿಗೆ ಮತ ಹಾಕುವ ಮುಸ್ಲಿಮರು ರಾಷ್ಟ್ರಭಕ್ತರು: ಈಶ್ವರಪ್ಪ

11:22 PM Sep 15, 2019 | Lakshmi GovindaRaju |

ಬೆಂಗಳೂರು: “ರಾಷ್ಟ್ರಭಕ್ತ ಮುಸ್ಲಿಮರು ಮಾತ್ರ ಬಿಜೆಪಿಗೆ ಮತ ಚಲಾಯಿಸುತ್ತಾರೆ. ರಾಷ್ಟ್ರದ್ರೋಹಿಗಳು, ಪಾಕಿಸ್ತಾನದ ಪರ ಇದ್ದವರು ನಮ್ಮ ಪಕ್ಷಕ್ಕೆ ಮತ ಹಾಕಲು ಹಿಂದೆ-ಮುಂದೆ ನೋಡುತ್ತಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಶ್ರೀರಾಮಸೇನೆ ಭಾನು ವಾರ ಪುರಭವನದಲ್ಲಿ ಏರ್ಪಡಿಸಿದ್ದ “370, 35 ಎ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು. “ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕಿಂತ ಮೊದಲು ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರಲು ಸಿದ್ಧರಿದ್ದರು. ಆದರೆ, ಅವರ ಕ್ಷೇತ್ರದಲ್ಲಿನ ಮುಸ್ಲಿಮರ ಓಟ್‌ ಕೈತಪ್ಪುತ್ತವೆ ಎಂಬ ಭೀತಿಯಿಂದ ಬಿಜೆಪಿಗೆ ಸೇರಲಿಲ್ಲ. ಮುಸ್ಲಿಮರ ಓಟ್‌ ನಂಬಿ ಶಾಸಕ ರಾದವರು ನಪುಂಸಕರು’ ಎಂದು ಆರೋಪಿಸಿದರು.

“ನನ್ನ ಕ್ಷೇತ್ರದಲ್ಲಿ 50ರಿಂದ 55 ಸಾವಿರ ಮುಸ್ಲಿಮರ ಮತಗಳಿವೆ. ಆದರೆ, ಈವರೆಗೂ ಕೈಮುಗಿದು ಮುಸ್ಲಿಮರ ಓಟ್‌ ಕೇಳಿಲ್ಲ. ಆದರೂ, 47 ಸಾವಿರ ಬಹುಮತದಿಂದ ಗೆದ್ದಿದ್ದೇನೆ. ಮುಸ್ಲಿಮರಲ್ಲೂ ದೇಶಾಭಿಮಾನ ಇದ್ದರೆ ಬಿಜೆಪಿಗೆ ಓಟ್‌ ಹಾಕುತ್ತಾರೆ. ಇಲ್ಲದಿದ್ದರೆ ಇಲ್ಲ’ ಎಂದು ವಾಗ್ಧಾಳಿ ನಡೆಸಿದರು.

ಶ್ರೀರಾಮಸೇನೆ ಹಿಂದುತ್ವ ವೀರ ಸೈನಿಕರ ತಯಾರಿಕ ಸಂಸ್ಥೆಯಾಗಿದೆ. ಪಾಕಿಸ್ತಾನ ಆಕ್ರಮಿತ ಪ್ರದೇಶ (ಪಿಒಕೆ)ವನ್ನು ಮುಂದಿನ ದಿನಗಳಲ್ಲಿ ನಾವು ವಶಕ್ಕೆ ಪಡೆಯಲಿದ್ದೇವೆ. ಇನ್ನೂ, ದೇಶದೆಲ್ಲೆಡೆ ಹಿಂದುತ್ವ, ರಾಷ್ಟ್ರೀಯತೆ ವಿಚಾರಧಾರೆಗಳನ್ನು ಹೆಚ್ಚಾಗಿ ಹರಡಿಸಬೇಕು ಎಂದು ಹೇಳಿದರು.

ಭಾರತಕ್ಕೆ ಸೇರಿದ್ದ ಲಾಲ್‌ಚೌಕ್‌ ಪ್ರದೇಶದಲ್ಲಿ ಪಾಕಿಸ್ತಾನ ತನ್ನ ರಾಷ್ಟ್ರಧ್ವಜ ಹಾರಾಟ ನಡೆಸಿ ಭಾರತಕ್ಕೆ ಸವಾಲು ಹಾಕಿತ್ತು. ಈ ಬಗ್ಗೆ ಸಂಸತ್‌ನಲ್ಲಿ ಬಿಜೆಪಿ ಸದಸ್ಯರು ಧ್ವನಿ ಎತ್ತಿದರೂ, ಆಗಿನ ಕೇಂದ್ರ ಸರ್ಕಾರ ಏನನ್ನೂ ಮಾತನಾಡದೇ ಸುಮ್ಮನಿತ್ತು. ಆದರೆ, ಬಿಜೆಪಿ “ತಿರಂಗಯಾತ್ರೆ’ ಮೂಲಕ ಲಾಲ್‌ಚೌಕ್‌ಗೆ ತೆರಳಿ ಪಾಕಿಸ್ತಾನದ ಧ್ವಜ ಕಿತ್ತು ತ್ರಿವರ್ಣ ಧ್ವಜ ಹಾರಿಸಲಾಯಿತು. ಅಯೋಧ್ಯೆದಲ್ಲಿ ಶ್ರೀರಾಮ ಮಂದಿರ ಧ್ವಂಸಗೊಳಿಸಿ ಬಾಬ್ರಿ ಮಸೀದಿ ಕಟ್ಟಿದ್ದಾರೆ. ಅಯೋಧ್ಯೆಯಲ್ಲೂ ಶೀಘ್ರವೇ ರಾಮಮಂದಿರ ನಿರ್ಮಿಸಲಾಗುವುದು ಎಂದರು.

Advertisement

ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌, ಜೈನ ಮಠದ ಜೈನ ಆಚಾರ್ಯ ದೇವೇಂದ್ರದಾಸ ಸಾಗರ ಸುರೇಶ್ವರಾಜಿ ಮಹಾರಾಜ್‌, ಡಾ.ಪಾವಗಡ ಪ್ರಕಾಶ್‌ ರಾವ್‌, ಶ್ರೀರಾಮಸೇನಾ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಕಾಶ್ಮೀರಿ ಸಮಾಜದ ಅಧ್ಯಕ್ಷ ಆರ್‌.ಕೆ.ಮಟ್ಟೂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಗೋಸುಂಬೆ ರಾಜಕಾರಣಿ: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷ ಲಾಟರಿ ಹೊಡೆದು ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ, ಕೆಜೆಪಿ ಎಂದು ನಮ್ಮ ಪಕ್ಷ ಇಬ್ಭಾಗವಾಗಿದ್ದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಲೇವಡಿ ಮಾಡಿದರು.

“ರಾಜ್ಯ ಬಿಜೆಪಿ ಸರ್ಕಾರ ಹೇಡಿ ಸರ್ಕಾರ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಅವರು, ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜ್ಯದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಹಿಂದುಳಿದವರು, ದಲಿತರನ್ನು ಅಭಿವೃದ್ಧಿ ಮಾಡಿದ್ದಾರೆಯೇ? ಸಿದ್ದರಾಮಯ್ಯ ಗೋಸುಂಬೆ ರಾಜಕಾರಣಿ, ಬಿಜೆಪಿ ಸರ್ಕಾರ ಹೇಡಿ ಎಂದು ಕರೆಯುವುದಾದರೆ, ಅವರಿಗೆ ಹಿಜಡಾತನ ಇದೆ ಎಂದು ಕರೆಯುತ್ತೇನೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸಲಾಗಿತ್ತು. ಆದರೆ, ಕಾಂಗ್ರೆಸ್‌ ನಿಷೇಧ ರದ್ದುಗೊಳಿಸಿತು. ಪ್ರಸ್ತುತ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮತ್ತೆ ಗೋ ಹತ್ಯೆ ನಿಷೇಧಿಸಲಾಗುವುದು.
-ಕೆ.ಎಸ್‌.ಈಶ್ವರಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next