ಹೊಸದಿಲ್ಲಿ: ಗಡ್ಡ ಬಿಡುವುದು ಇಸ್ಲಾಂನ ಸಂಪ್ರದಾಯ. ಆದರೆ ಯಾರು ಮೀಸೆಯನ್ನು ಬೋಳಿಸಿ ಗಡ್ಡ ಬಿಡುತ್ತಾರೊ ಅವರು ಉಗ್ರರು , ಉಗ್ರರ ಮುಖವಾಗಿ ದೇಶ ಮತ್ತು ವಿಶ್ವದಲ್ಲಿ ಪ್ರತಿಬಿಂಬಿತವಾಗುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಾಸೀಂ ರಾಝ್ವಿ ಅವರು ವಿವಾದಕ್ಕೆ ಗುರಿಯಾಗಿದ್ದಾರೆ.
ರಾಝ್ವಿ ಅವರ ಹೇಳಿಕೆಯ ವಿಡಿಯೋವು ಬಿಡುಗಡೆಗೊಂಡಿದ್ದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಹಲವು ಮುಸ್ಲಿಮರು ವ್ಯಾಪಕ ಆಕ್ರೋಶವನ್ನು ಹೊರ ಹಾಕಿದ್ದಾರೆ.
ರಾಝ್ವಿ ಅವರು ಮೌಲ್ವಿಗಳು ಹೊರಡಿಸುವ ಫತ್ವಾಗಳ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದು , ಸರ್ಕಾರ ಜನರಲ್ಲಿ ದ್ವೇಷ ಹುಟ್ಟಿಸುವ ಇಂತಹ ಆದೇಶಗಳ ಕುರಿತು ರಾಜದ್ರೋಹ ನಡೆಸಿದ ಪ್ರಕರಣ ಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕೇರಳದಲ್ಲಿ ಬಿಂದಿ ಇಟ್ಟ ಕಾರಣಕ್ಕೆ ಮದರಸಾದಿಂದ ವಿದ್ಯಾರ್ಥಿನಿಯನ್ನು ಸಂಸ್ಪೆಂಡ್ ಮಾಡಿದ ಕ್ರಮವನ್ನು ಖಂಡಿಸಿರುವ ರಾಝ್ವಿ ಈ ದೇಶದಲ್ಲಿ ಮಹಿಳೆ ಬಿಂದಿಯಾಗಲಿ ಕುಂಕುಮವಾಗಲಿ ಹಣೆಗೆ ಇಡಬಹುದು, ಅಂತಹ ಪವಿತ್ರ ಆಚರಣೆಗಳು ಹರಾಮ್ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರಾಝ್ವಿ ಅವರಿಗೆ ಈಗಾಗಲೆ ಹಲವು ಬಾರಿ ಜೀವ ಬೆದರಿಕೆಗಳು ಬಂದಿದ್ದು ಉತ್ತರಪ್ರದೇಶ ಸರಕಾರ ಅವರಿಗೆ ವೈ ಕೆಟಗರಿಯ ಭದ್ರತೆ ಕಲ್ಪಿಸಿದೆ.