Advertisement

ಸಿಎಎ ವಿರುದ್ಧ ಮುಸ್ಲಿಮರ ಬೃಹತ್‌ ಪ್ರತಿಭಟನೆ

09:35 PM Dec 18, 2019 | Lakshmi GovindaRaj |

ಹಾಸನ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಮುಸಲ್ಮಾನರ ಬುಧವಾರ ಕೆಲ ಕಾಲ ಅಂಗಡಿಗಳನ್ನು ಬಂದ್‌ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡದಿದ್ದರಿಂದ ನಗರದ ವಲ್ಲಭಭಾಯಿ ರಸ್ತೆಯಲ್ಲಿರುವ ಅಮೀರ್‌ ಹುಸೇನ್‌ ಕಟ್ಟಡದಲ್ಲಿ ಸಭೆ ಸೇರಿ ಮಧ್ಯಾಹ್ನದವರೆಗೂ ಅಲ್ಲಿಯೇ ಕಪ್ಪುಪಟ್ಟಿ ಧರಿಸಿ ಸತ್ಯಾಗ್ರಹ ನಡೆಸಿದರು.

Advertisement

ಒಡೆದಾಳುವ ನೀತಿ: ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಹಿತಾರಕ್ಷಣಾ ಒಕ್ಕೂಟದ ಅಧ್ಯಕ್ಷ ನಾಸೀರ್‌ ಹುಸೇನ್‌ ರೆಜ್ವಿ ಅವರು ಮಾತನಾಡಿ, ಏಕೀಕೃತ ಭಾರತವನ್ನು ಒಡೆದಾಳುವ ದುರುದ್ದೇಶವನ್ನಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಪೌರತ್ವ ಕಾಯಿದೆಗೆ ತಿದ್ದುಪಡಿ ಮಾಡಿದೆ. ಮುಸಲ್ಮಾನರನ್ನು ಗುರಿಯಾಗಿಟ್ಟುಕೊಂಡು ತಿದ್ದುಪಡಿ ಮಾಡಿರುವ ಪೌರತ್ವ ಕಾಯಿದೆಯನ್ನು ಮುಸಲ್ಮಾನ ಒಕ್ಕೂಟವು ವಿರೋಧಿಸುತ್ತೇವೆ ಎಂದರು.

ಬೆಳಗಿನಿಂದ ಮಧ್ಯಾಹ್ನ ಒಂದು ಗಂಟೆಯವರೆಗೂ ಮುಸಲ್ಮಾನರು ಅಂಗಡಿ ಗಳನ್ನು ಬಂದ್‌ ಮಾಡಿ ಪ್ರತಿಭಟನೆ ಮಾಡಿದರು. ಜಾತ್ಯತೀತ ಸಂಘಟನೆಗಳೊಂದಿಗೆ ಸೇರಿ ಮುಸ್ಲಿಂ ಹಿತರಕ್ಷಣಾ ಒಕ್ಕೂಟವು ಈ ದೇಶದ ಸ್ಥಿತಿ-ಗತಿ ಬಗ್ಗೆ, ಪೌರತ್ವ ಕಾಯ್ದೆ ತಿದ್ದುಪಡಿಯ ದುಷ್ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದೆ. ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದೂ ಹೇಳಿದರು.

ಸಂವಿಧಾನ ವಿರೋಧಿ: ಪೌರತ್ವ ಕಾಯ್ದೆ ತಿದ್ದುಪಡಿಯು ಸಂವಿಧಾನ ವಿರೋಧಿ ಕಾಯ್ದೆಯಾಗಿದೆ. ಅದನ್ನು ಕೇಂದ್ರ ಸರ್ಕಾರ ಕೂಡಲೇ ಹಿಂತೆಗೆ‌ದುಕೊಳ್ಳಬೇಕು. ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಆದರೆ ಮುಸ್ಲಿಮರನ್ನು ಹೊರಗಿಟ್ಟು ವಲಸೆ ಬಂದಿರುವವರಿಗೆ ಪೌರತ್ವ ನೀಡಲು ಮಾಡಿರುವ ಕಾಯ್ದೆ ತಿದ್ದುಪಡಿಯು ಜಾತ್ಯತೀತ ಧೋರಣೆಗೆ ವಿರುದ್ಧವಾಗಿದೆ ಎಂದ ಅವರು, ನಾವು ಯಾರಿಗೂ ಹೆದರುವುದಿಲ್ಲ. ನಾವು ಹೆದರುವುದು, ಗೌರವ ಕೊಡುವುದು ಭಾರತದ ಸಂವಿಧಾನಕ್ಕೆ ಮಾತ್ರ.

ಹೆದರಿಕೆ ಹುಟ್ಟಿಸುವಂತಹ ವಾತಾವರಣ ನಿರ್ಮಾಣ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡನೀಯ ಎಂದರು. ಈಸಂದರ್ಭದಲ್ಲಿ ಸಭೆಯಲ್ಲಿ ಭಾಗವಸಿದ್ದ ಎಲ್ಲಾ ಮುಸ್ಲಿಮರು ತೋಳಿಗೆ ಕಪ್ಪು ಪಟ್ಟಿ ಧರಿಸಿದ್ದರು. ಮುಸ್ಲಿಂ ಧರ್ಮ ಗುರುಗಳಾದ ಮುಫ್ತಿ ಜುಬೇರ್‌ ಅಹಮದ್‌, ಹೈದರಾಲಿಖಾನ್‌, ಮಹಮದ್‌ ಅನ್ಸರ್‌ ಸಾಹೇಬ್‌ ಮುಸ್ಲಿಂ ಹಿತರಕ್ಷಣಾ ಒಕ್ಕೂಟದ ಪದಾಧಿಕಾರಿಗಳಾದ ಫಾರೂಖ್‌, ಸೈಯದ್‌ ತಾಜ್‌ ಮತ್ತಿತತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

ಸಿಎಎ ವಿರೋಧಿಸಿ ಡಿವೈಎಫ್ಐ, ಎಸ್‌ಎಫ್ಐ ಪ್ರತಿಭಟನೆ
ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಹಾಗೂ ದೆಹಲಿಯಲ್ಲಿ ಜಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಎಸ್‌ಎಫ್ಐ ಮತ್ತು ಡಿವೈಎಫ್ಐ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು. ನಗರದ ಹೇಮಾವತಿ ಪ್ರತಿಮೆಯ ಬಳಿ ಸಮಾವೇಶಗೊಂಡ ಎಸ್‌ಎಫ್ಐ ಮತ್ತು ಡಿವೈಎಫ್ಐ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಾನತೆ ವಿರುದ್ಧ: ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ಸಂಸತ್ತು ಅಂಗೀಕರಿಸಿರುವ ಪೌರತ್ವ ಕಾಯ್ದೆ ತಿದ್ದುಪಡಿಯು ಸಂವಿಧಾನ ವಿರೋಧಿಯಾಗಿದೆ. ಈ ಕಾಯ್ದೆಯು ದೇಶದ ಪೌರತ್ವ ಅಥವಾ ನಾಗರಿಕತ್ವವನ್ನು ಮತ ಧರ್ಮದ ಆಧಾರದ ಮೇಲೆ ನಿರ್ಧರಿಸುತ್ತಿರುವುದು ಖಂಡನೀಯ. ಭಾರತ ಎಲ್ಲಾ ಮತಧರ್ಮಗಳ ಜನರನ್ನು ಸಮಾನವಾಗಿ ಕಾಣುವ ದೇಶ. ಆದ್ದರಿಂದ ಭಾರತ ಅವರೆಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದರು.

ತಾರತಮ್ಯ ಮಾಡುವ ಪೌರತ್ವ ತಿದ್ದುಪಡಿ ಕಾಯ್ಕೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ಮಿಕ ಮತ್ತು ಇತರೆ ಕಾರಣಗಳಿಂದಾಗಿ ಭಾರತಕ್ಕೆ ವಲಸೆ ಬರುವ ಹಿಂದೂ, ಸಿಖ್‌, ಜೈನ, ಬೌದ್ಧ ಧರ್ಮೀಯ ವಲಸಿಗರಿಗೆ ಮಾತ್ರ ಭಾರತದ ಪೌರತ್ವ ಕೊಡುವುದಾಗಿ ಹೇಳುತ್ತದೆ. ಆದರೆ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ರಾಷ್ಟ್ರಗಳಾದ ಬರ್ಮಾ ಮತ್ತು ಶ್ರೀಲಂಕಾ ದೇಶಗಳಿಂದ ಧಾರ್ಮಿಕ ಮತ್ತು ಭಾಷೆ ಸಾಂಸ್ಕೃತಿಕ ಕಾರಣಕ್ಕೆ ದಾಳಿಗೊಳಗಾಗಿ ಭಾರತಕ್ಕೆ ವಲಸೆ ಬರುವ ಹೋಹಿಂಗ್ಯಾ ಮುಸ್ಲಿಮರು ಮತ್ತು ತಮಿಳರ ಪೌರತ್ವವನ್ನು ನಿರಾಕರಿಸಿದೆ. ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದರಿಂದ ಅವರನ್ನು ಹೊರಗಿಡುತ್ತದೆ ಎಂದರು.

ಭಾರತೀಯ ಮುಸ್ಲಿಮರಿಗೆ ಮಾರಕ: ಭಾರತದ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ದೇಶಾದ್ಯಂತ ಜಾರಿಗೊಳಿಸವ ಮೂಲಕ ದಾಖಲೆಗಳನ್ನು ಒದಗಿಸಲಾಗದ ಭಾರತೀಯ ಮುಸ್ಲಿಮರನ್ನು ಅಕ್ರಮ ವಲಸಿಗರೆಂದು ಘೋಷಿಸಿ ಅವರ ಪೌರತ್ವವನ್ನು ರದ್ದುಗೊಳಿಸುವ ಮತ್ತು ಅವರನ್ನು ವಲಸಿಗರ ಕ್ಯಾಂಪ್‌ಗ್ಳಿಗೆ ತಳ್ಳುವ ಹುನ್ನಾರವನ್ನು ಹೊಂದಿದೆ ಎಂದು ಆರೋಪಿಸಿದರು.

ಭಾರತದ ಪೌರತ್ವಕ್ಕೆ ಮತಧರ್ಮದ ಪರೀಕ್ಷೆ ಒಡ್ಡಿರುವುದರಿಂದ ಈ ಕಾಯ್ದೆಯು ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಮಾನತೆ ಮತ್ತು ಜಾತ್ಯತೀತತೆಯ ನೀತಿಗಳನ್ನು ಉಲ್ಲಂಘಿಸುತ್ತದೆ. ಭಾರತದ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ದೇಶಾದ್ಯಂತ ನಡೆಸುವುದು ಬಿಜೆಪಿಯ ರಾಜಕೀಯ ದುರುದ್ದೇಶವಾಗಿದೆ ಎಂದ ಅವರು, ಜಾಮಿಯಾ ವಿಶ್ವದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮತ್ತು ಗೂಂಡಾಗಳ ಹಲ್ಲೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು. ಸಂಘಟನೆಗಳ ಮುಖಂಡರಾದ ಎಂ.ಜಿ.ಪೃಥ್ವಿ, ನವೀನ್‌ ಕುಮಾರ್‌, ವಸಂತ್‌ ಕುಮಾರ್‌, ರಮೇಶ್‌ ವಿವೇಕ್‌, ರಕ್ಷಿತ, ಮನುಪ್ರಕಾಶ್‌, ಸ್ವರೂಪ್‌ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next