ಇಂಡಿ: ಏ. 22ರಂದು ಪಟ್ಟಣದ ಅಂಜುಮನ್ ಆವರಣದಲ್ಲಿ ಮುಸ್ಲಿಂ ಬಾಂಧವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಸ್ಥಳೀಯ ಶಾಸಕರು, ಮುಸ್ಲಿಂ ಧರ್ಮದ ಧರ್ಮಗುರುಗಳಿಂದ ಗೌರವ ಸ್ವೀಕರಿಸದೆ ಇದ್ದದ್ದು ನಮ್ಮ ಸಮಾಜದ ಗುರುಗಳಿಗೆ ಅಪಮಾನ ಮಾಡಿದಂತಾಗಿದೆ ಎಂದು ಮುಸ್ಲಿಂ ಸಮಾಜದ ಮುಖಂಡ ಅಯೂಬ ನಾಟೀಕಾರ ಹೇಳಿದರು.
ರವಿವಾರ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ಬಡ ಯುವಕರು ತಮ್ಮ ಕೈಲಾದಷ್ಟು ದೇಣಿಗೆ ಶೇಖರಿಸಿಕೊಂಡು ಇಫ್ತಾರ್ ಕೂಟ ಹಮ್ಮಿಕೊಂಡಿದ್ದರು. ಅದರಲ್ಲಿ ಜಾತಿ ಭೇದ ಮರೆತು ಎಲ್ಲ ಸಮಾಜದ ಮುಖಂಡರನ್ನೂ ಆಹ್ವಾನಿಸಲಾಗಿತ್ತು. ಅದರಲ್ಲಿ ಶಾಸಕರಿಗೂ ಆಹ್ವಾನಿಸಲಾಗಿತ್ತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರಿಗೂ ಆಹ್ವಾನ ನೀಡಲಾಗಿತ್ತು ಎಂದರು.
ಬಿಜೆಪಿ, ಜೆಡಿಎಸ್ ಮುಖಂಡರು ಸರಿಯಾದ ಸಮಯಕ್ಕೆ ಹಾಜರಿದ್ದು ಇಫ್ತಾರ್ ಕೂಟದ ವೇದಿಕೆಯನ್ನು ನಮ್ಮ ಸಮಾಜದ ಮೌಲ್ವಿಗಳಾದ ಶಾಕೀರ್‌ಹುಸೇನ್ ಖಾಸ್ಮಿ ಅವರೊಂದಿಗೆ ಹಂಚಿಕೊಂಡಿದ್ದರು. ಶಾಸಕ ಯಶವಂತರಾಯಗೌಡ ಪಾಟೀಲರು ತಡವಾಗಿ ಬಂದಿದ್ದರು, ಅವರಿಗೂ ವೇದಿಕೆಗೆ ಆಹ್ವಾನಿಸದರೂ ಅವರು ವೇದಿಕೆ ಏರಲಿಲ್ಲ. ಕೊನಬೆಗೆ ಆತಿಥ್ಯ ಸ್ವೀಕರಿಸಲು ವೇದಿಕೆಗೆ ಕರೆದರೂ ಬರಲಿಲ್ಲ. ನಮ್ಮ ಸಮಾಜದ ಮೌಲ್ವಿಗಳು ವೇದಿಕೆಯಿಂದ ಕೆಳಗಿಳಿದು ಬಂದು ಶಾಸಕರಿಗೆ ಗೌರವಿಸಲು ಹೋದಾಗ ಸತ್ಕಾರ ತಿರಸ್ಕರಿಸಿ, ನಮ್ಮ ಸಮಾಜದ ಮೌಲ್ವಿಗಳನ್ನು ಅಪಮಾನ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಭಾರತದಲ್ಲಿರುವ ಎಲ್ಲ ಧರ್ಮದವರು ಅದರಲ್ಲಿ ಮುಸ್ಲಿಂ ಮತ್ತು ಹಿಂದೂಗಳು ಭಾಯಿ-ಭಾಯಿ ಎಂಬಂತೆ ಬದುಕುತ್ತಿರುವುದು ನಿಮಗೆ ಸೇರಿಕೆಯಾಗುತ್ತಿಲ್ಲವೇ? ಒಡೆದಾಳುವ ನೀತಿ ಮಾಡುತ್ತ ನಮ್ಮ ಸಮಾಜದ ಮತಗಳನ್ನು ಪಡೆದು ಶಾಸಕರಾಗುತ್ತೀರಿ, ಮತ್ತೆ ನಮ್ಮ ಸಮಾಜಕ್ಕೆ ಎದುರು ಬೀಳುತ್ತೀರಿ. ನಮ್ಮ ಸಮಾಜದ ಧರ್ಮ ಗುರುಗಳಿಗೆ ಅಪಮಾನ ಮಾಡುತ್ತಿದ್ದೀರಿ. ನೀವು ಶಾಸಕರು ಎಂಬುದನ್ನು ಮರೆತು ಗೌಡಕಿ ಮಾಡುತ್ತಿದ್ದೀರಿ ಎಂದು ನಮಗೆ ಅನಿಸುತ್ತಿದೆ. ನಾವೇನು ನಿಮ್ಮ ವಿರೋಧಿಗಳಲ್ಲ. ಆದರೆ ನಮ್ಮ ಸಮಾಜದ, ನಮ್ಮ ಧರ್ಮಗುರುಗಳನ್ನು ನೀವು ಅಪಮಾನ ಮಾಡಿದರೆ ಸುಮ್ಮನೆ ಕೂರಲ್ಲ ಎಂದು ಎಚ್ಚರಿಸಿದರು.
ಇದು ರಂಜಾನ್ ತಿಂಗಳು ಇಸ್ಲಾಂ ಬಾಂಧವರಿಗೆ ಪವಿತ್ರವಾಗಿದ್ದು. ನಾವು ಇಲ್ಲಿ ಯಾರೂ ರಾಜಕೀಯ ಮಾಡಲಕ್ಕೆ ಬಂದಿಲ್ಲ. ಸಮಾಜ ಬಾಂಧವರ ಇಫ್ತಾರ್ ಕೂಟದಲ್ಲಿ ಎಲ್ಲ ಧರ್ಮದವರು ಭಾಗಿಯಾಗುತ್ತಾರೆ. ಎಲ್ಲ ಧರ್ಮದ ಜನರನ್ನು ನಾವು ಪ್ರೀತಿಯಿಂದ ಕಾಣುತ್ತೇವೆ. ಆದರೆ ಶಾಸಕರಾದ ತಾವುಗಳು ಒಂದು ಧರ್ಮದ ಗುರುಗಳಿಗೆ ಅವಮಾನ ಮಾಡಿದ್ದು ಎಷ್ಟು ಸರಿ ಎಂಬುದನ್ನು ಅವಲೋಕನ ಮಾಡಿಕೊಳ್ಳಿ ಎಂದರು.
ನೀವು ಶಾಸಕರಾಗಲು ನಮ್ಮ ಸಮಾಜದ ಕೊಡುಗೆ ಎಷ್ಟಿದೆ ಎಂಬುದನ್ನು ಅರಿಯಬೇಕು. ನಮ್ಮ ಸಮಾಜದ ಮತ್ತು ಇತರೆ ಸಮಾಜದ ಮತಗಳನ್ನು ಪಡೆದು ಶಾಸಕರಾಗಿದ್ದನ್ನು ನೀವು ಮರೆತಿದ್ದೀರಿ. ನಮ್ಮ ಸಮಾಜದ ಮೌಲ್ವಿಗಳಿಗೆ ಅಪಮಾನ ಮಾಡಿದ್ದು ನಿಮಗೆ ಸರಿ ಕಾಣುತ್ತದೆಯೇ ಎಂದು ಪ್ರಶ್ನಿಸಿದರು. ಶಾಸಕರ ವರ್ತನೆ ನಮ್ಮ ಸಮಾಜದವರಿಗೆ ಬೇಸರ ತರಿಸಿದೆ. ಮುಂಬರುವ ದಿನಗಳಲ್ಲಿ ನೀವು ಮಾಡಿದ ಅಪಮಾನದ ಪ್ರತಿಪಲ ಎದುರಿಸಬೇಕಾಗುತ್ತದೆ ಎಂದರು.ಇರ್ಫಾನ್ ಅಗರಖೇಡ, ಸದ್ದಾಂ ಕೊಟ್ನಾಳ, ನಿಯಾಜ್ ಅಗರಖೇಡ, ಬಾಷಾ ಇಂಡಿಕರ, ಅಬ್ದುಲ್ ಬಾಬಾನಗರ ಇದ್ದರು.